ಅನುಷ್ಕಾ ಶೆಟ್ಟಿಯಿಂದ ಬೆಂಗಳೂರಿನ ಮೊದಲ ಕಂಬಳ ಉದ್ಘಾಟನೆ: ರಜನಿಕಾಂತ್ ಸೇರಿ ಹಲವು ನಟ, ನಟಿಯರು ಭಾಗಿ

ನವೆಂಬರ್ 25 ಮತ್ತು 26 ರಂದು ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಕಂಬಳದಲ್ಲಿ ಭಾಗವಹಿಸಲು 116 ಕಂಬಳ ಕೋಣಗಳ ಮಾಲೀಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಪುತ್ತೂರು ಶಾಸಕ ಹಾಗೂ ಬೆಂಗಳೂರು...
ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ

ಮಂಗಳೂರು: ನವೆಂಬರ್ 25 ಮತ್ತು 26 ರಂದು ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಕಂಬಳದಲ್ಲಿ ಭಾಗವಹಿಸಲು 116 ಕಂಬಳ ಕೋಣಗಳ ಮಾಲೀಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಪುತ್ತೂರು ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಅವರು ಸೋಮವಾರ ತಿಳಿಸಿದ್ದಾರೆ.

ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ 8 ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾಗುವ ನಿರೀಕ್ಷೆಯಿದೆ. ಈ ಮೂಲಕ ಎರಡು ದಿನಗಳ ಕಂಬಳವು ಹಲವು ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದೆ ಎಂದಿದ್ದಾರೆ.

ಸಾಮಾನ್ಯವಾಗಿ ಕಂಬಳ ಟ್ರ್ಯಾಕ್ 145 ಮೀಟರ್‌ ಇರುತ್ತದೆ. ಆದರೆ ಬೆಂಗಳೂರಿನಲ್ಲಿ 155 ಮೀಟರ್ ಅಳತೆಯ ಅತಿ ಉದ್ದದ 'ಕರೆ' (ಸ್ಲಶ್ ಟ್ರ್ಯಾಕ್) ಯನ್ನು ನಿರ್ಮಿಸಿದ್ದು, ಓಟದ ವಿಜೇತರಿಗೆ 1.50 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ರಾಜಧಾನಿಯಲ್ಲಿ ತುಳು ಭಾಷಿಕ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಬೆಂಗಳೂರಿನಲ್ಲಿ ಕಂಬಳ ಆಯೋಜಿಸಲಾಗಿದೆ. ಈ ಕಂಬಳದಲ್ಲಿ ಕನಿಷ್ಠ 125 ಜೋಡಿ ಕೋಣಗಳು ಭಾಗವಹಿಸುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಪ್ರತಿ ಕೋಣಗಳ ಮಾಲೀಕರಿಗೆ ಸಾರಿಗೆ ವೆಚ್ಚವಾಗಿ 50,000 ರೂ. ನೀಡಲಾಗುತ್ತಿದೆ. ದಕ್ಷಿಣ ಕನ್ನಡದ ಸಾಂಪ್ರದಾಯಿಕ ಖಾದ್ಯಗಳನ್ನು ಪ್ರದರ್ಶಿಸುವ ಮಳಿಗೆಗಳನ್ನು ಸ್ಥಾಪಿಸುತ್ತೇವೆ'' ಎಂದು ಅವರು ತಿಳಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನ ಕಂಬಳ ಟ್ರ್ಯಾಕ್ ಗೆ ಹೆಸರು ಅಂತಿಮಗೊಳಿಸುತ್ತೇವೆ. ಈ ಕಾರ್ಯಕ್ರಮದಲ್ಲಿ ನಟರಾದ ರಜನಿಕಾಂತ್, ಸುನೀಲ್ ಶೆಟ್ಟಿ, ಶಿಲ್ಪಾ ಶೆಟ್ಟಿ, ಯಶ್ ಮತ್ತು ದರ್ಶನ್ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್ ಅವರು ಭಾಗವಹಿಸಲಿದ್ದಾರೆ. ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಭಾಗವಹಿಸುವ ಬಗ್ಗೆ ಇನ್ನೂ ಖಚಿತಪಡಿಸಿಲ್ಲ. ನಟಿ ಅನುಷ್ಕಾ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com