ಪ್ರಸಾದ್ ಬಿದ್ದಪ್ಪ ಪುತ್ರನಿಗೆ ಮತ್ತಷ್ಟು ಸಂಕಷ್ಟ; 'ಪೊಲೀಸ್ ಅಧಿಕಾರಿ ಮುಸ್ಲಿಂ' ಎಂದ ಆ್ಯಡಂ ವಿರುದ್ಧ ಧರ್ಮ ನಿಂದನೆ ಕೇಸ್
ಬೆಂಗಳೂರು: ಖ್ಯಾತ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ವಿರುದ್ಧ ಮೂರನೇ ಪೊಲೀಸ್ ದೂರು ದಾಖಲಾಗಿದ್ದು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪೊಲೀಸ್ ಅಧಿಕಾರಿ ಮುಸ್ಲಿಂ ಎಂದು ಧರ್ಮವನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಆ್ಯಡಂ ಬಿದ್ದಪ್ಪ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಧರ್ಮ ನಿಂದನೆ ಪ್ರಕರಣ ದಾಖಲಿಸಲಾಗಿದೆ.
ಕಳೆದ ವಾರ, ಟ್ರಾಫಿಕ್ ಪೊಲೀಸರು ಕುಡಿದು ವಾಹನ ಚಾಲನೆ ಮಾಡಿದ ಮತ್ತು ರೋಡ್ ರೇಜ್ ಪ್ರಕರಣಗಳಲ್ಲಿ ಆ್ಯಡಂ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದರು.
ಈಗ ಆ್ಯಡಂ ಪೊಲೀಸ್ ಅಧಿಕಾರಿಯ ಧರ್ಮವನ್ನು ಅವಮಾನಿಸಿದ ವಿಡಿಯೋ ವೈರಲ್ ಆಗಿದದ್ದು, ಈ ಸಂಬಂಧ ಮತ್ತೊಂದು ಕೇಸ್ ದಾಖಲಿಸಲಾಗಿದೆ. ಎಲ್ಲಾ ಮೂರು ಪ್ರಕರಣಗಳು ಒಂದೇ ಘಟನೆಗೆ ಸಂಬಂಧಿಸಿವೆ.
ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ 45 ವರ್ಷದ ಗೌಸ್ ಪಾಷಾ ಆ್ಯಡಂ ವಿರುದ್ಧ ದೂರು ನೀಡಿದ್ದಾರೆ.
ಅಕ್ಟೋಬರ್ 25ರ ರಾತ್ರಿ ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಬಳಿ ಆ್ಯಡಂ ಬಿದ್ದಪ್ಪ ಅವರು ಅಪಾಯಕಾರಿಯಾಗಿ ಕಾರು ಚಲಾಯಿಸಿಕೊಂಡು ಬಂದು ರಾಹುಲ್ ಎಂಬಾತನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಕಾರು ಚಲಾಯಿಸುತ್ತಿದ್ದ ಆರೋಪಿ ಬಳಿಗೆ ಬಂದು ಪ್ರಶ್ನಿಸಿದಾಗ, ಆರೋಪಿ ಆ್ಯಡಂ ಬಿದ್ದಪ್ಪ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಈ ವೇಳೆ ಆ್ಯಡಂ ‘ಗೌಸ್, ಗೌಸ್ ಪಾಷಾ, ಒಬ್ಬ ಮುಸ್ಲಿಂ’ ಎನ್ನುತ್ತಾ ಪೋಲೀಸರ ಮೇಲೆ ಉಗುಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ