
ಯಾದಗಿರಿ: ಮಗುವಿಗೆ ವಿಷ ಹಾಕಿ ಮಲತಾಯಿಯೋರ್ವಳು ಹತ್ಯೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ವರದಿಯಾಗಿದೆ.
ಮಹಿಳೆ ಹಾಲಿನಲ್ಲಿ ಕ್ರಿಮಿನಾಶಕ ಬೆರೆಸಿ 5 ತಿಂಗಳ ಮಗುವಿಗೆ ಕುಡಿಸಿ ಹತ್ಯೆ ಮಾಡಿದ್ದಾಳೆ
ಬಬಲ ಗ್ರಾಮದಲ್ಲಿ ಆ.30 ರಂದು ಈ ಘಟನೆ ವರದಿಯಾಗಿದೆ. ಪೊಲೀಸ್ ಅಧಿಕಾರಿಗಳ ಮಾಹಿತಿಯ ಪ್ರಕಾರ, ಸಿದ್ಧಪ್ಪ ಎಂಬುವವರ ಮೊದಲ ಪತ್ನಿ ಶ್ರೀದೇವಿಗೆ ಮಕ್ಕಳಾಗಿರಲಿಲ್ಲ. ಈ ಕಾರಣದಿಂದ ಆತ ದೇವಮ್ಮ ಎಂಬ ಮಹಿಳೆಯನ್ನು ವಿವಾಹವಾಗಿದ್ದ. ಈ ದಂಪತಿಗೆ 4 ಮಕ್ಕಳಿದ್ದರು. ಆದರೆ ಇತ್ತೀಚೆಗೆ ಶ್ರೀದೇವಿ ಸಹ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿದ್ದರು. ಆ ಮಗುವಿಗೆ ಸಂಗೀತ ಎಂದು ನಾಮಕರಣ ಮಾಡಲಾಗಿತ್ತು.
ಆಸ್ತಿಯಲ್ಲಿ ಶ್ರೀದೇವಿ ಮಗುವಿಗೆ ಪಾಲು ಹೋಗುತ್ತದೆಂದು ಯೋಚಿಸಿದ ದೇವಮ್ಮ ಮಗುವಿಗೆ ಹಾಲಿನಲ್ಲಿ ಕ್ರಿಮಿನಾಶಕ ಹಾಕಿ ಸಾಯಿಸಿದ್ದಾಳೆ. ವದಗೆರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದೇವಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement