ಸಿಎಂ ಸಿದ್ದರಾಮಯ್ಯ ಗಮನಕ್ಕೆ ಬಂದ 'ಮರ್ಯಾದೆ ಹತ್ಯೆ' ವರದಿ: TNIE ಗೆ ಶ್ಲಾಘನೆ; ಪ್ರತ್ಯೇಕ ಕಠಿಣ ಕಾನೂನು ತರಲು ಚಿಂತನೆ

ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ‘ಮರ್ಯಾದಾ’ ಹತ್ಯೆ ಪ್ರಕರಣಗಳನ್ನು ಖಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್(The New Indian Express) ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ‘ಮರ್ಯಾದಾ’ ಹತ್ಯೆ ಪ್ರಕರಣಗಳನ್ನು ಖಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (The New Indian Express) ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಾಜದಲ್ಲಿ ನಡೆಯುತ್ತಿರುವ ಇಂತಹ ಅಪರಾಧಗಳನ್ನು ತಡೆಯಲು ಪ್ರತ್ಯೇಕ ಕಠಿಣ ಕಾನೂನು ರೂಪಿಸಲು ಸಂಬಂಧಪಟ್ಟವರನ್ನು ಭೇಟಿ ಮಾಡಿ ಚರ್ಚೆ ನಡೆಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. 

ನಿನ್ನೆ ಸೆಪ್ಟೆಂಬರ್ 4 ರಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ‘Killing Honour In The Name of Honour Killings’ ವರದಿ ಪ್ರಕಟವಾಗಿತ್ತು. ಇದನ್ನು ಓದಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಮರ್ಯಾದಾ ಹತ್ಯೆ ಪ್ರಕರಣಗಳು ಬರುತ್ತದೆ, ಆದರೆ ಈಗ ನೀಡುವ ಶಿಕ್ಷೆ ಇದಕ್ಕೆ ಸಾಕಾಗುವುದಿಲ್ಲ, ಗಂಭೀರವಾಗಿಲ್ಲ, ಹೀಗಾಗಿ ಕಾನೂನನ್ನು ಬಲಪಡಿಸಬೇಕು ಮತ್ತು ಇನ್ನಷ್ಟು ಕಠಿಣಗೊಳಿಸಬೇಕು ಎಂದು ಹೇಳಿದರು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ಪ್ರತಿಕ್ರಿಯಿಸಿದ ಸಿಎಂ, “ಇವು ಮರ್ಯಾದಾ ಹತ್ಯೆಗಳಲ್ಲ, ಮರ್ಯಾದೆಗೇಡು ಹತ್ಯೆಗಳು. ಇಂತಹ ಕೃತ್ಯಗಳು ಸಮಾಜಕ್ಕೆ ನಾಚಿಕೆಗೇಡು. ಇದಕ್ಕೆ ಸಾಮಾಜಿಕ ಮತ್ತು ಕಾನೂನು ಪರಿಹಾರದ ಅಗತ್ಯವಿದೆ. ಪ್ರಸ್ತುತ, ಕಾನೂನಿನ ಪ್ರಕಾರ, ಇದನ್ನು ಐಪಿಸಿ 302 ರ ಅಡಿಯಲ್ಲಿ ದಾಖಲಿಸಲಾಗಿದೆ. ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಹೆಣ್ಣುಮಕ್ಕಳು ಬಲಿಪಶುಗಳಾಗುತ್ತಿದ್ದಾರೆ ಎಂದರು. 

ಮರ್ಯಾದಾ ಹತ್ಯೆಯನ್ನು ಎದುರಿಸಲು ಕಾನೂನನ್ನು ಇನ್ನಷ್ಟು ಕಠಿಣಗೊಳಿಸುವುದು ಹೇಗೆ ಎಂದು ಚರ್ಚಿಸಲು, ನಾವು ಮಹಿಳಾ ಕಾರ್ಯಕರ್ತರು, ಮಹಿಳಾ ಸಂಘಟನೆಗಳು ಮತ್ತು ಕಾನೂನು ತಜ್ಞರೊಂದಿಗೆ ಸಭೆ ನಡೆಸುತ್ತೇವೆ. ಚರ್ಚೆಯ ಫಲಿತಾಂಶದ ಆಧಾರದ ಮೇಲೆ ನಾವು ಮುಂದಕ್ಕೆ ಅದನ್ನು ಕೊಂಡೊಯ್ಯುತ್ತೇವೆ ಎಂದರು. 

ಮರ್ಯಾದಾ ಹತ್ಯೆಗಳನ್ನು ಎತ್ತಿ ತೋರಿಸುವಲ್ಲಿ TNIE ಯ ಪ್ರಯತ್ನ ಮತ್ತು ಕಾಳಜಿಯನ್ನು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು. ಇದನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡ ಸಿದ್ದರಾಮಯ್ಯ, “ಸಮಾಜದಲ್ಲಿ ಮರ್ಯಾದೆ ಹೆಸರಿನಲ್ಲಿ ನಡೆಯುವ ಕೊಲೆಗಳು ಯಾವಾಗಲೂ ಅಶುದ್ಧ ಮತ್ತು ನಮ್ಮ ಸಮಾಜಕ್ಕೆ ಅವಮಾನ. ಸಾಮಾಜಿಕ ಮತ್ತು ಕಾನೂನು ಪರಿಹಾರಗಳನ್ನು ಜಾರಿಗೊಳಿಸಲು ಮತ್ತು ಬಲಪಡಿಸಲು ಎಲ್ಲಾ ಸಂಬಂಧಪಟ್ಟವರ ಸಕ್ರಿಯ ಭಾಗವಹಿಸುವಿಕೆ ಅಗತ್ಯವಿದೆ.

ನಾವೆಲ್ಲರೂ ಒಂದೇ ಧ್ವನಿಯಲ್ಲಿ 'ಮರ್ಯಾದೆ ಹತ್ಯೆ’ಯನ್ನು ಖಂಡಿಸೋಣ. ಮರ್ಯಾದೆ ಹತ್ಯೆಯ ವಿರುದ್ಧ ನಮ್ಮ ಕಳವಳಗಳನ್ನು ವ್ಯಕ್ತಪಡಿಸಲು ನಮ್ಮೊಂದಿಗೆ ಕೈಜೋಡಿಸುತ್ತಿರುವುದಕ್ಕೆ ನಿಮಗೆ ಧನ್ಯವಾದಗಳು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕಾ ಬಳಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com