ವೈವಾಹಿಕ ಕಲಹಕ್ಕೆ ಶಾಂತಿ ಭಂಗ ಕಾನೂನು ಅನ್ವಯಿಸಬೇಡಿ: ಕರ್ನಾಟಕ ಹೈಕೋರ್ಟ್
ಬೆಂಗಳೂರು: ಪತಿ-ಪತ್ನಿಯರ ಜಗಳದಲ್ಲಿ ಮತ್ತು ಕ್ಷುಲ್ಲಕ ವಿಚಾರಗಳಿಗೂ ಐಪಿಸಿ ಸೆಕ್ಷನ್ 504(ಶಾಂತಿ ಭಂಗ, ಉದ್ದೇಶಪೂರ್ವಕ ಅವಮಾನ) ಮತ್ತು 506 (ಬೆದರಿಕೆ) ಅನ್ವಯಿಸುವುದು ಅಭ್ಯಾಸವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ತನಿಖಾ ಅಧಿಕಾರಿಗಳು ಎರಡು ವರ್ಷ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗೆ ನಿಬಂಧನೆಗಳನ್ನು ಹಾಕುವಾಗ ಎಚ್ಚರಿಕೆ ವಹಿಸಬೇಕು. ಪತಿ-ಪತ್ನಿಯರ ನಡುವೆ ವಿವಾದವಿದ್ದರೆ ಅದು ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುತ್ತದೆ ಎಂದು ಕಲ್ಪಿಸಿಕೊಳ್ಳಲಾಗದು ಎಂದು ಹೈಕೋರ್ಟ್ ಹೇಳಿದೆ.
"ಈ ಪ್ರಕರಣದಲ್ಲಿ ಸೆಕ್ಷನ್ 506 ಅನ್ನು ಹಾಕಲಾಗಿದೆ. ಇದು ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ ನೀಡುತ್ತದೆ. ಆದರೆ ಈ ಪ್ರಕರಣದಲ್ಲಿ ಪತಿ-ಪತ್ನಿಯರ ನಡುವೆ ಉಂಟಾದ ಕ್ಷುಲ್ಲಕ ಜಗಳ ಎಂದು ಸತ್ಯಗಳು ಸೂಚಿಸುತ್ತಿವೆ. ಅರ್ಜಿದಾರರ ವಿರುದ್ಧ ಅನಗತ್ಯವಾಗಿ ಸೆಕ್ಷನ್ 506 ಅನ್ನು ಹಾಕಲಾಗಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಪತಿ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿದ್ದಾರೆ.
ಈ ಅಪರಾಧಗಳು ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುತ್ತವೆ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, "ತನಿಖಾಧಿಕಾರಿಯು ಕೇವಲ ಸೆಕ್ಷನ್ 504 ಅಥವಾ 506 ಅಡಿ ಕೇಸ್ ದಾಖಲಿಸುವುದು ತಮಾಷೆಯ ವಿಚಾರ ಅಲ್ಲ" ಎಂದು ಕೋರ್ಟ್ ಹೇಳಿದೆ.
ಬಾಗಲಕೋಟೆ ಮೂಲದ ವಿವೇಕಾನಂದ ಹಾಗೂ ಅವರ ಪತ್ನಿ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಪೂಜೆ ಮಾಡಲು ಸಾಮಾಗ್ರಿ ತರಲು ಪತ್ನಿ ಹಣ ಕೇಳಿದ್ದು, ಇದಕ್ಕೆ ಪತಿ ಒಪ್ಪದಿದ್ದಾಗ ಇಬ್ಬರ ನಡುವೆ ಜಗಳವಾಗಿದೆ ಮತ್ತು ಈ ಸಂಬಂಧ ಕುಟುಂಬದವರೆಲ್ಲರ ವಿರುದ್ಧ ದೂರು ದಾಖಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕುಟುಂಬದ ಎಲ್ಲ ಸದಸ್ಯರನ್ನು ಆರೋಪಿಗಳ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಆದರೆ 498A, 504 ಮತ್ತು ಐಪಿಸಿ ಸೆಕ್ಷನ್ 506 ಅಡಿ ಪತಿಯನ್ನು ಏಕೈಕ ಆರೋಪಿಯನ್ನಾಗಿ ಉಳಿಸಿಕೊಂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ದೂರು ಅಥವಾ ಚಾರ್ಜ್‌ಶೀಟ್‌ನಲ್ಲಿ ಸೂಚಿಸಿರುವ ನಿಬಂಧನೆಗಳ ಅಡಿಯಲ್ಲಿ ಎಲ್ಲಿಯೂ ಅಪರಾಧಗಳು ಶಿಕ್ಷಾರ್ಹವಾಗಿಲ್ಲ, ಹೀಗಾಗಿ ಪತಿ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸುವುದಾಗಿ ನ್ಯಾಯಾಲಯ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ