ಕಾವೇರಿ ವಿವಾದ: ಕರ್ನಾಟಕ ಬಂದ್ ಗೆ ಚಿಂತನೆ; ತಮಿಳರನ್ನು ವಾಪಸ್ ಕರೆಸಿಕೊಳ್ಳಿ- ವಾಟಾಳ್ ನಾಗರಾಜ್ ಆಗ್ರಹ

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ, ಕರ್ನಾಟಕ ಬಂದ್ ಗೆ ಚಿಂತನೆ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ವಾಟಾಳ್ ನಾಗರಾಜ್
ವಾಟಾಳ್ ನಾಗರಾಜ್

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ, ಕರ್ನಾಟಕ ಬಂದ್ ಗೆ ಚಿಂತನೆ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನಲ್ಲಿ ಸ್ಟಾಲಿನ್‌ಗೆ ಗೆಲುವಾಗಿದೆ. ನಮ್ಮ ವಾದ ಆಲಿಸಬೇಕಿತ್ತು. ಕತ್ತು ಕಡಿದಿದ್ದಾರೆ, ರುಂಡ ಕೆಳಗೆ ಬಿದ್ದಿದ್ದೇ ಸರಿ ಅಂತಾ ಸುಪ್ರೀಂ ಹೇಳಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಪ್ರಾಧಿಕಾರ ನೀಡಿದ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ನಮ್ಮ ವಾದ ಕೇಳಬೇಕಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರು ನಮ್ಮ ಕತ್ತು ತೆಗೆದಿದ್ದಾರೆ. ಅವರು ದೆಹಲಿಯಲ್ಲಿದ್ದಾರೆ. ಪ್ರಾಧಿಕಾರದವರು ಕರ್ನಾಟಕಕ್ಕೆ ಬಂದು ಕಾವೇರಿ ಭಾಗದ ಎಲ್ಲಾ ಜಲಾಶಯ ನೋಡಲಿ. ನ್ಯಾಯ ಕೇಳೋದಕ್ಕೆ ನಾವು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಕರ್ನಾಟಕ ದಿಕ್ಕಿಲ್ಲದಂತೆ ಆಗಿದೆ. ಮುಖ್ಯಮಂತ್ರಿ ಏನು ನಿರ್ಧಾರ ಮಾಡ್ತಾರೆ ನೋಡೋಣ. ರಾಜ್ಯದ ಎಲ್ಲಾ ಸಂಸದರು ರಾಜೀನಾಮೆ ಕೊಟ್ಟು ನಿಮ್ಮ ಧೈರ್ಯ ತೋರಿಸಿ ಎಂದು  ಆಗ್ರಹಿಸಿದರು. 

ಬೆಂಗಳೂರಿನಲ್ಲಿ ತಮಿಳರು ಇದ್ದಾರೆ. ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೊಸೂರು ಮೂಲಕ ಕರೆಸಿಕೊಳ್ಳಲಿ ಎಂದು ಆಗ್ರಹಿಸಿದರು. ಬೆಂಗಳೂರಿನಲ್ಲಿ ತಮಿಳರು ಎಷ್ಟು ಮಂದಿ ಇದ್ದಾರೆ. ಯಾವ ಕಾಲದಿಂದ ಇದ್ದಾರೆ. ಅವರು ನೀರು ಕುಡಿಯಬೇಕೋ, ಬೇಡವೋ, ನೀವೇ ಹೇಳಿ. ಕುಡಿಯುವುದು ಬೇಡ ಎಂದರೆ ಎಲ್ಲರನ್ನೂ ಕರೆಸಿಕೊಳ್ಳಿ. ತಮಿಳು ಸಿನಿಮಾ ನಿಲ್ಲಿಸುತ್ತೇವೆ. ರಜನಿಕಾಂತ್ ಇಲ್ಲಿಗೆ ಬರಲು ಬಿಡುವುದಿಲ್ಲ. ಅವರು ಏನು ನಿರ್ಧಾರ ಮಾಡ್ತಾರೋ ಮಾಡಲಿ. ಕರ್ನಾಟಕದ ಪರ ನಿಲ್ತಾರಾ, ಅಲ್ಲ ತಮಿಳುನಾಡು ಪರ ನಿಲ್ತಾರಾ ಎಂದು ಪ್ರಶ್ನಿಸಿದರು. 

ಕರ್ನಾಟಕ ಬಂದ್ ಬಗ್ಗೆ ಇನ್ನೆರಡು ದಿನಗಳಲ್ಲಿ ಕನ್ನಡಪರ ಸಂಘಟನೆಗಳು ಚರ್ಚೆ ಮಾಡುತ್ತೇವೆ. ನಂತರ ಹೋರಾಟಕ್ಕೆ ನಿರ್ಧರಿಸುತ್ತೇವೆ.  ನಟರು ಬರುತ್ತೇವೆಂದು ಹೇಳಿದ್ದಾರೆ, ನೋಡೋಣ ಯಾವ ರೀತಿ ಬರುತ್ತಾರೆಂದು. ನಮ್ಮ ಕನ್ನಡ ನಟರು ಎಲ್ಲೆಲ್ಲೋ ಇದ್ದಾರೆ, ಎಲ್ಲರೂ ಇಳಿದು ಕೆಳಗೆ ಬರಲಿ. ನಾಡಿನ ಪರ, ಕನ್ನಡ ಪರ, ರೈತರ ಪರ ಸ್ಯಾಂಡಲ್‌ವುಡ್‌ ನಟರು ಬರಲಿ. ಬರದಿದ್ದರೆ ಏನು ಮಾಡಬೇಕೋ ಮಾಡೋಣ. ಶಾಸಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆಂದು ನೋಡೋಣ ಎಂದರು. 

ಕಾವೇರಿ ಹೋರಾಟದಲ್ಲಿ ಬೆಂಗಳೂರಿನವರು ಬಹಳ ಮಂದಗತಿಯಲ್ಲಿದ್ದಾರೆ‌. ಮೊದಲು ಬೆಂಗಳೂರು ನಗರದಲ್ಲಿ ಶುರುವಾಗಿದ್ದು ತಮಿಳರ ದರ್ಬಾರು. ಬಳಿಕ ಮಾರ್ವಾಡಿ, ಸಿಂಧಿಗಳು, ವಿದೇಶದಿಂದ ಬಂದವರದ್ದು ದರ್ಬಾರು. ಇವರು ಯಾರಿಗೂ ಕನ್ನಡಿಗರ ಪರಿಸ್ಥಿತಿ ಅರ್ಥ ಆಗುತ್ತಿಲ್ಲ. ಬೆಂಗಳೂರಿಗೆ ಬರುವ ನೀರು ಒಂದು ದಿನ ಬರದಿದ್ರೆ ಕಷ್ಟ ಗೊತ್ತಾಗುತ್ತದೆ. ಬೆಂಗಳೂರಿನ ಜನರಿಗೆ ಕಾವೇರಿ ನೀರು ಬೇಕಾ? ಬೇಡವಾ? ಕಾವೇರಿ ನೀರು ಬೇಡ ಅನ್ನುವವರು ಸರ್ಕಾರಕ್ಕೆ ಪ್ರಮಾಣ ಪತ್ರ ಕೊಡಲಿ ಎಂದು ಅವರು ಆಗ್ರಹಿಸಿದರು. 

ಕಾವೇರಿ ಹೋರಾಟ ಅಂದ್ರೆ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆ, ಕನ್ನಡಪರ ಸಂಘಟನೆಗಳು, ರೈತರು ಇಷ್ಟಕ್ಕೇ ಸೀಮಿತ ಆಗಬಾರದು. ಕಾವೇರಿ ಹೋರಾಟ ಅಂದ್ರೆ ರಾಜ್ಯದ ಎಲ್ಲಾ ರೈತರು, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ, ಮಂಗಳೂರು ಹಾಗೂ ಬೆಂಗಳೂರಿನ ಪ್ರಶ್ನೆಯಾಗಿದೆ ಎಂದು ಅವರು ಪ್ರತಿಪಾದಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com