
ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪ ಮೇಲೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ವಲಯ 8ರ ಸಹಾಯ ಆಯುಕ್ತ ಚಂದ್ರಶೇಖರಗೌಡ ಅವರು ನೀಡಿದ ದೂರಿನ ಆಧಾರದ ಮೇಲೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಕಲಂ 153(ಎ), 295(ಎ) ಐಪಿಸಿ ಅಡಿ ಪ್ರಕರಣ ದಾಖಲಿಸಲಾಗಿದೆ.
ಇಂದು ಈದ್ಗಾ ಮೈದಾನದ ಗಣೇಶ ವಿಸರ್ಜನೆ ವೇಳೆ ಮೈದಾನಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುತಾಲಿಕ್ ಅವರು, ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸುವವರು ದೇಶದ್ರೋಹಿಗಳು. ಅಂಜುಮನ್ ಸಂಸ್ಥೆಯವರ ದುರದ್ದೇಶ ಏನೆಂದು ಈಗ ಎಲ್ಲರಿಗೂ ಗೊತ್ತಾಗಿದೆ. ಇವರು ದೇಶ ವಿಭಜನೆ ಮಾಡಿದ ದ್ರೋಹಿಗಳು. ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ತಾಕತ್ತು ಹಿಂದೂ ಸಮಾಜಕ್ಕಿದೆ. ನಿಮ್ಮ ನಮಾಜ್‌ಗೂ ನಾವು ಅಡ್ಡಿಪಡಿಸಬೇಕಾಗುತ್ತೆ. ರಾಣಿ ಚೆನ್ನಮ್ಮ ಮೈದಾನದಲ್ಲಿ ನಮಾಜ್‌ಗೆ ಅವಕಾಶ ಕೊಡದಂತೆ ಕೋರ್ಟ್‌ಗೆ ಹೋಗುತ್ತೇವೆ. ಇದು ಪಾಕಿಸ್ತಾನವಲ್ಲ, ನಿಮ್ಮಪ್ಪನ ಆಸ್ತಿಯಲ್ಲ, ವಿರೋಧಿಗಳ ಸೊಕ್ಕಡಗಿಸುವ ತಾಕತ್ತು ನಮಗಿದೆ ಎಂದು ವಾಗ್ದಾಳಿ ನಡೆಸಿದ್ದರು.
ಇದೀಗ ಇತರೆ ಧರ್ಮಗಳ ಭಾವನೆಗಳಿಗೆ ಧಕ್ಕೆ ಮಾಡುವ ಉದ್ದೇಶದಿಂದ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದ ಮೇಲೆ ಮುತಾಲಿಕ್ ವಿರುದ್ಧ ಕೇಸ್ ದಾಖಲಿಸಲಾಗಿದೆ.
Advertisement