
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಮಂಡ್ಯದ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ.
ಮಂಡ್ಯದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡಿಗೆ ನೀರು ಬಿಡುವ ಮೂಲಕಆತುರದ ನಿರ್ಧಾರ ಕೈಗೊಂಡು ರಾಜ್ಯದ ರೈತರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಆರೋಪಿಸಿದರು.
ನಟಿ ಲೀಲಾವತಿ ಇಳಿ ವಯಸ್ಸಿನಲ್ಲಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾದರು. ಮಂಡ್ಯದ ವಿವಿ ಪ್ರತಿಮೆ ಮುಂಭಾಗ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು. ರೈತರ ಜೊತೆ ನಾವಿದ್ದೇವೆ, ನಮ್ಮ ಜನರು ಯಾವಾಗಲು ನಗುನಗುತ್ತಾ ಇರಬೇಕು. ಕಾವೇರಿ ಕಣ್ಣೀರು ಆಗಬಾರದು. ನಮ್ಮ ಜನ ನೀರು ನೀರು ಅಂತ ಕಣ್ಣೀರು ಹಾಕಬಾರದು. ನೀರಿಗೆ ಎಂದು ಬರಬಾರದು.ಕಾವೇರಿ ನೀರು ನಮ್ಮ ಹಕ್ಕು ಎಂದರು.
ನಟ ವಿನೋದ್ ರಾಜ್ ಮಾತನಾಡಿ, ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಸಂಕಷ್ಟ ಸೂತ್ರ ಅನಿವಾರ್ಯವಿದೆ. ಕಾನೂನಿಗಿಂತ ನಾವು ದೊಡ್ಡವರಲ್ಲ. ಸುಪ್ರೀಂಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವಾಸ್ತವ ಸ್ಥಿತಿ ನೋಡಿ ಆದೇಶ ಮಾಡಬೇಕು. ರೈತರ ಹೋರಾಟಕ್ಕೆ ಜಯ ಸಿಗಬೇಕು ಎಂದರು.
Advertisement