ಕೊಡಗಿನಲ್ಲಿ ‘ಅಕ್ರಮ’ ಭೂ ಪರಿವರ್ತನೆ ಮುಂದುವರಿದರೆ, ಕಾವೇರಿ ಬತ್ತಿಹೋಗಲಿದೆ!

ಜಿಲ್ಲೆಯ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಕೊಡಗಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ನಡೆಯುತ್ತಿರುವ ಅಕ್ರಮ ಭೂ ಪರಿವರ್ತನೆಯ ವಿರುದ್ಧ ನಿವಾಸಿಗಳು ಒಗ್ಗೂಡಿ ಹೋರಾಡಬೇಕು ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನ ಹಾಗೂ ಕೊಡಗು...
ಕಾವೇರಿ ನದಿ
ಕಾವೇರಿ ನದಿ

ಮಡಿಕೇರಿ: ಜಿಲ್ಲೆಯ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಕೊಡಗಿನಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ನಡೆಯುತ್ತಿರುವ ಅಕ್ರಮ ಭೂ ಪರಿವರ್ತನೆಯ ವಿರುದ್ಧ ನಿವಾಸಿಗಳು ಒಗ್ಗೂಡಿ ಹೋರಾಡಬೇಕು ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನ ಹಾಗೂ ಕೊಡಗು ರಕ್ಷಣಾ ವೇದಿಕೆ ಸದಸ್ಯರು ಕರೆ ನೀಡಿದ್ದಾರೆ.

“ಇಂದು ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಒತ್ತಾಯಿಸಿ ರಾಜ್ಯ ಬಂದ್ ಮಾಡಲಾಗಿದೆ. ಆದರೆ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಯಾರೂ ಸಿದ್ಧರಿಲ್ಲ. ಭೂ ಪರಿವರ್ತನೆಗೆ ಡಿಸಿ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲು ಬರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ, ಅಕ್ರಮವಾಗಿ ಭೂ ಪರಿವರ್ತನೆ ನಡೆಯುತ್ತಿದೆ'' ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನದ ಅಧ್ಯಕ್ಷ ಕರ್ನಲ್(ನಿವೃತ್ತ) ಮುತ್ತಣ್ಣ ಅವರು ಹೇಳಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಟೆಕ್ನಾಲಜಿಯ ವಿಜ್ಞಾನಿ ರಾಮಚಂದ್ರ ಅವರ ಎಚ್ಚರಿಕೆಯನ್ನು ಉಲ್ಲೇಖಿಸಿದ ಮುತ್ತಣ್ಣ ಅವರು, “ಕೊಡಗಿನಲ್ಲಿ ಭೂಪರಿವರ್ತನೆ ಮುಂದುವರಿದರೆ, ಕಾವೇರಿ ಶೀಘ್ರದಲ್ಲೇ ಬತ್ತಿಹೋಗುತ್ತದೆ” ಮತ್ತು ಇದರಿಂದ ಎಂಟು ಕೋಟಿ ಜನ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಾಣಿಜ್ಯ ಲೇಔಟ್‌ಗಳು ಮತ್ತು ರೆಸಾರ್ಟ್ ಉದ್ದೇಶಗಳಿಗಾಗಿ ಹಲವಾರು ಭೂ ಪರಿವರ್ತನೆಗಳ ನಿದರ್ಶನಗಳನ್ನು ನೀಡಿದ ಅವರು, “ನಾವು ಈ ಸೈಟ್‌ಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಿವಾಸಿಗಳು ಇಂತಹ ಅಕ್ರಮ ವಾಣಿಜ್ಯ ಕಟ್ಟಡಗಳು ಮತ್ತು ಲೇಔಟ್‌ಗಳಲ್ಲಿ ಹೂಡಿಕೆ ಮಾಡಬಾರದು. ಬದಲಿಗೆ ಎಲ್ಲರೂ ಒಗ್ಗೂಡಿ ಅಕ್ರಮ ಭೂ ಪರಿವರ್ತನೆಗಳ ವಿರುದ್ಧ ಹೋರಾಡಬೇಕು ಎಂದಿದ್ದಾರೆ.

ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅಕ್ರಮವಾಗಿ ರೆಸಾರ್ಟ್‌ಗಳ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯ ಭ್ರಷ್ಟಾಚಾರವೇ ಕಾರಣ ಎಂದು ಆರೋಪಿಸಿದ ವೇದಿಕೆ ಸದಸ್ಯರು, ಈ ಅಂಶಗಳನ್ನು ಶೀಘ್ರದಲ್ಲೇ ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com