ಮೇಕೆದಾಟು ಯೋಜನೆಯಿಂದ ತಮಿಳು ನಾಡಿಗೆ ಹಾನಿಯಿಲ್ಲ: ಸಿಎಂ ಸಿದ್ದರಾಮಯ್ಯ

ತಮಿಳು ನಾಡಿಗೆ 123 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ನಿಯಂತ್ರಣ ಪ್ರಾಧಿಕಾರ ಆದೇಶ ನೀಡಿದೆ. ಪ್ರಾಧಿಕಾರದ ಸಭೆಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದೇವೆ. ನಮ್ಮ ಅಣೆಕಟ್ಟುಗಳಲ್ಲಿ ನೀರಿಲ್ಲ ಎಂದು ಹೇಳಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾವೇರಿ ನೀರಿಗಾಗಿ ಕನ್ನಡಿಗರ ಪ್ರತಿಭಟನೆ
ಕಾವೇರಿ ನೀರಿಗಾಗಿ ಕನ್ನಡಿಗರ ಪ್ರತಿಭಟನೆ

ಬೆಂಗಳೂರು: ತಮಿಳು ನಾಡಿಗೆ 123 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ನಿಯಂತ್ರಣ ಪ್ರಾಧಿಕಾರ ಆದೇಶ ನೀಡಿದೆ. ಪ್ರಾಧಿಕಾರದ ಸಭೆಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದೇವೆ. ನಮ್ಮ ಅಣೆಕಟ್ಟುಗಳಲ್ಲಿ ನೀರಿಲ್ಲ ಎಂದು ಹೇಳಿದ್ದೇವೆ. ನಾವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ನಿನ್ನೆ ಶುಕ್ರವಾರ ಬೆಂಗಳೂರಿನಲ್ಲಿ ಕಾನೂನು ತಜ್ಞರು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ಜೊತೆ ಸಭೆ ನಡೆಸಿದ ಬಳಿಕ ಹೇಳಿದ್ದಾರೆ.

ಕಾವೇರಿ ಮಾತ್ರವಲ್ಲದೆ ಇತರೆ ಜಲ ವಿವಾದಗಳಿಗೂ ತಜ್ಞರ ಸಮಿತಿ ರಚಿಸುವಂತೆ ಕಾನೂನು ತಜ್ಞರು ಸರ್ಕಾರಕ್ಕೆ ಸೂಚಿಸಿದ್ದಾರೆ ಎಂದು ಸಿಎಂ ಹೇಳಿದರು. ಸಮಿತಿಯು ಕಾವೇರಿ ನೀರಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕಾಲಕಾಲಕ್ಕೆ ಕಾನೂನು ತಂಡಕ್ಕೆ ಸಲಹೆಗಳನ್ನು ನೀಡಬೇಕು. ನಾವು ಅದನ್ನು ಪರಿಗಣಇಸಿ ಅದರ ಮೇಲೆ ಕೆಲಸ ಮಾಡಲಿದ್ದೇವೆ ಎಂದರು.

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ನ್ಯಾಯಮೂರ್ತಿಗಳಾದ ಶಿವರಾಜ್ ಪಾಟೀಲ್, ವಿ.ಗೋಪಾಲ ಗೌಡ, ಆರ್.ವಿ.ರವೀಂದ್ರನ್, ಪಿ.ವಿಶ್ವನಾಥ ಶೆಟ್ಟಿ ಮತ್ತು ಎ.ಎನ್.ವೇಣುಗೋಪಾಲ ಗೌಡ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ, ಮಧುಸೂದನ್ ನಾಯಕ್, ವಿಜಯಶಂಕರ್, ಉದಯ್ ಹೊಳ್ಳ, ಪ್ರೊ.ರವಿವರ್ಮ ಕುಮಾರ್ ಮತ್ತು ಪ್ರಭುಲಿಂಗ ನಾವಡಗಿ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಸ್ತಾವಿತ ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಸಿಎಂ, ರಾಜ್ಯವು ಇದನ್ನು ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರಲಿದೆ ಎಂದರು. ಈ ಯೋಜನೆಯು ತಮಿಳು ನಾಡಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಈ ಅಂಶವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಂಡಿಸುವಂತೆ ತಜ್ಞರು ಸರ್ಕಾರಕ್ಕೆ ಸೂಚಿಸಿದ್ದಾರೆ. ಪ್ರಸ್ತಾವಿತ ಜಲಾಶಯವು 67 ಟಿಎಂಸಿ ಅಡಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ, ಇದನ್ನು ಕುಡಿಯುವ ಉದ್ದೇಶ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಬಹುದು. ಸಂಕಷ್ಟದ ಸಮಯದಲ್ಲಿ, ನಾವು ತಮಿಳು ನಾಡಿಗೆ ನೀರು ಬಿಡಬಹುದು ಎಂದರು. 

ನೀರು ಬಿಡುವುದನ್ನು ತಡೆಯಲು ಸಾಧ್ಯವಿಲ್ಲ: ಸಿಎಂ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ತಡೆಯಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ, ಇದು ನ್ಯಾಯಾಂಗ ನಿಂದನೆಯಾಗಬಹುದು. ಇದರಿಂದ ಸರ್ಕಾರವನ್ನು ವಜಾಗೊಳಿಸಬಹುದು ಎಂದರು. 

ಡಿಎಂಕೆ ಜತೆ ಮಾತುಕತೆ: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕಾವೇರಿ ಸಮಸ್ಯೆಯನ್ನು ಪರಿಹರಿಸಲು ತನ್ನ I.N.D.I.A ಮೈತ್ರಿಕೂಟದ "ಸ್ನೇಹ" ವನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com