
ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಇಂದಿಗೆ ಮುಗಿದಿದೆ. ಸಾಮಾನ್ಯವಾಗಿ ಜೂನ್ 1 ರಿಂದ ಸೆಪ್ಟೆಂಬರ್ 30ರ ಅವಧಿಯನ್ನು ಮುಂಗಾರು ಎನ್ನಲಾಗುತ್ತದೆ. ಈ ನಾಲ್ಕು ತಿಂಗಳ ಅವಧಿಯಲ್ಲಿ ರಾಜ್ಯದ 236 ತಾಲ್ಲೂಕುಗಳ ಪೈಕಿ ಕೇವಲ 4 ತಾಲ್ಲೂಕುಗಳಲ್ಲಿ ಮಾತ್ರ ಈ ಬಾರಿ ಅತ್ಯಧಿಕ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಈ ಕುರಿತ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಅವಧಿಯಲ್ಲಿ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ತುಮಕೂರು, ರಾಮನಗರ, ಕೋಲಾರ, ಬಳ್ಳಾರಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳು ಮಳೆ ಕೊರತೆ ಪಟ್ಟಿಯಲ್ಲಿವೆ. 23 ಜಿಲ್ಲೆಗಳ 146 ತಾಲ್ಲೂಕುಗಳಲ್ಲಿ ಮಳೆ ಕೊರತೆಯಾಗಿದೆ. 8 ಜಿಲ್ಲೆಗಳ 86 ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ನಿನ್ನೆಯ ಮಳೆಯ ನಂತರ ದಕ್ಷಿಣ ಕನ್ನಡ ಜಿಲ್ಲೆ ಈ ಪಟ್ಟಿಗೆ ಸೇರಿದೆ. ಈ ಬಾರಿಯ ಮುಂಗಾರು ಮಳೆಯು ವಿಶೇಷವಾಗಿ ಆಗಸ್ಟ್‌ನಲ್ಲಿ ರೈತರಿಗೆ ಭಾರಿ ನಷ್ಟ ಮತ್ತು ಸಂಕಟವನ್ನುಂಟು ಮಾಡಿದೆ.
ಬೆಂಗಳೂರಿನಲ್ಲಿ ಸೆಪ್ಟೆಂಬರ್ ನಲ್ಲಿ ಸರಾಸರಿ 208.3 ಮಿ.ಮೀಗೆ ಬದಲಾಗಿ 248.4 ಮಿಲಿ ಮೀಟರ್ ಮಳೆಯಾಗಿದೆ. ಮುಂಗಾರು ಅವಧಿಯಲ್ಲಿ ಇಲ್ಲಿಯವರೆಗೂ ಆಗಬೇಕಾಗಿದ್ದ ಸರಾಸರಿ ಒಟ್ಟು ಮಳೆ ಪ್ರಮಾಣ 597.7 ಮಿ.ಮೀ. ಆದರೆ ಆಗಿರುವುದು 474.8 ಮಿ. ಮೀ. ಒಟ್ಟಾರೇ ವರ್ಷದಲ್ಲಿ ಆಗಬೇಕಾಗಿದ್ದ ಸರಾಸರಿ ಮಳೆ 980 ಮಿ.ಮಿ. ಆದರೆ ಈಗ 817.6 ಮಿ.ಮೀ ಮಳೆಯಾಗಿದೆ.
ಮುಂಬರುವ ದಿನಗಳಲ್ಲಿ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಅತಿ ಹೆಚ್ಚು ಮಳೆಯೊಂದಿಗೆ ಸಾಧಾರಣದಿಂದ ವ್ಯಾಪಕ ಭಾರೀ ಮಳೆಯಾಗಬಹುದು, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
Advertisement