ಕೋಲಾರ: ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು; ಸಂಬಂಧಿಕರಿಂದ ಚಿಕಿತ್ಸೆ ವಿಳಂಬ ಆರೋಪ!
ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಬಾಣಂತಿ ಮೃತಪಟ್ಟಿದ್ದು ಮೃತಳ ಪತಿ ಹಾಗೂ ಸಂಬಂಧಿಕರು ಸಾವಿಗೆ ವೈದ್ಯರು ಹಾಗೂ ಸ್ಟಾಫ್ ನರ್ಸ್‌ಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
Published: 04th April 2023 12:40 AM | Last Updated: 04th April 2023 06:53 PM | A+A A-

ಮೃತ ಬಾಣಂತಿ ಸಂಬಂಧಿಕರ ಪ್ರತಿಭಟನೆ
ಕೋಲಾರ: ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಬಾಣಂತಿ ಮೃತಪಟ್ಟಿದ್ದು ಮೃತಳ ಪತಿ ಹಾಗೂ ಸಂಬಂಧಿಕರು ಸಾವಿಗೆ ವೈದ್ಯರು ಹಾಗೂ ಸ್ಟಾಫ್ ನರ್ಸ್‌ಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
28 ವರ್ಷದ ಭಾರತಿ ಮೃತಪಟ್ಟಿದ್ದು ಆಕೆಯ ಪತಿ ಬಂಗಾರಪೇಟೆಯ ವಿಜಯನಗರ ವಿಸ್ತಾರದ ನಿವಾಸಿ ಮಂಜುನಾಥ್ ದೂರಿನ ಮೇರೆಗೆ ಬಂಗಾರಪೇಟೆ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 174(ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ಅವರು ಆರ್‌ಸಿಎಚ್ ಅಧಿಕಾರಿ ಡಾ.ವಿಜಯ ಕುಮಾರಿ ಅವರನ್ನೊಳಗೊಂಡ ನಾಲ್ಕು ಸದಸ್ಯರ ತಂಡವನ್ನು ರಚಿಸಿ ವಿವರವಾದ ತನಿಖೆಗೆ ಆದೇಶಿಸಿದ್ದಾರೆ.
ಏಪ್ರಿಲ್ 31ರಂದು ಮಧ್ಯಾಹ್ನ ಭಾರತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತದನಂತರ ತಡರಾತ್ರಿ ಕಾಲು ನೋವು ಕಾಣಿಸಿಕೊಂಡಿತ್ತು. ಈ ಬಗ್ಗೆ ದೂರು ನೀಡಲಾಯಿತು. ಭಾರತಿ ತೀವ್ರ ನೋವಿನಿಂದ ಬಳಲುತ್ತಿದ್ದರು. ಆದರೆ ಸಂಬಂಧಪಟ್ಟ ಸ್ಟಾಫ್ ನರ್ಸ್ ಅಥವಾ ವೈದ್ಯರು ವಾರ್ಡ್‌ಗೆ ಧಾವಿಸಲಿಲ್ಲ. ಕೊನೆಗೂ ಬಂದ ನರ್ಸ್ ಚುಚ್ಚುಮದ್ದು ತರಲು ಹೇಳಿದರು. ಚುಚ್ಚುಮದ್ದು ನೀಡಿದರೂ ನೋವು ಕಡಿಮೆಯಾಗಲಿಲ್ಲ. ಆಗ ವೈದ್ಯರು ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು ಎಂದು ಮಹಿಳೆ ಪತಿ ಮಂಜುನಾಥ ಹೇಳಿದರು.
ತಕ್ಷಣವೇ ಭಾರತಿ ಅವರನ್ನು ರಾತ್ರಿ 11:30ರ ಸುಮಾರಿಗೆ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಪ್ರಯೋಜನವಾಗಲಿಲ್ಲ. ಆಕೆ ಮೃತಪಟ್ಟಿದ್ದಾರೆ.
ವೈದ್ಯರು ಹಾಗೂ ಸ್ಟಾಫ್ ನರ್ಸ್‌ಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಸಂಬಂಧಿಕರು, ದಾಖಲಾತಿಯಿಂದ ಹೆರಿಗೆಯಾಗುವವರೆಗೂ ವಾರ್ಡ್‌ಗೆ ಶಿಫ್ಟ್ ಮಾಡಲು ಕೂಡ ಹಣ ತೆಗೆದುಕೊಂಡಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ಮಾತನಾಡಿ, ಈಗಾಗಲೇ ವಿವರವಾದ ವಿಚಾರಣೆ ಆರಂಭವಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದರು.