
ಅಮಿತ್ ಶಾ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಲವು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.
ಇಂಡಿಯಾ ಟುಡೆ ಕರ್ನಾಟಕ ರೌಂಡ್ ಟೇಬಲ್ 2023 ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಬಿಜೆಪಿ ಯಾವಾಗಲೂ ಬದಲಾವಣೆಯಲ್ಲಿ ನಂಬಿಕೆ ಹೊಂದಿದೆ ಎಂದು ಹೇಳಿದ್ದಾರೆ. ಆದಾಗ್ಯೂ ಮೇ.10 ರಂದು ಚುನಾವಣೆ ಎದುರಿಸಲಿರುವ ಕರ್ನಾಟಕದಲ್ಲಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಬಿಜೆಪಿಯಿಂದಾದ ಬದಲಾವಣೆ ಕಡಿಮೆ ಎಂದು ಅಮಿತ್ ಶಾ ಹೇಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಟಿಕೆಟ್ ವಂಚಿತ ನಾಯಕರು ಪಕ್ಷ ತೊರೆಯುತ್ತಿರುವ ಸಂದರ್ಭದಲ್ಲಿ ಅಮಿತ್ ಶಾ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಟಿಕೆಟ್ ನೀಡದೇ ಇರುವುದನ್ನು ಪ್ರತಿಭಟಿಸಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಲಿಂಗಾಯತ ನಾಯಕರ ಬಂಡಾಯ: ಡ್ಯಾಮೇಜ್ ಕಂಟ್ರೋಲ್ ಗೆ 'ಶಾ' ತಂತ್ರ; ತಡರಾತ್ರಿ ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ
ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ: ಅಮಿತ್ ಶಾ ವಿಶ್ವಾಸ
ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಅಮಿತ್ ಶಾ, ಜಗದೀಶ್ ಶೆಟ್ಟರ್ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ಭಾವಿಸಿದ್ದರೆ, ಕನಿಷ್ಠ ಅವರು ಸ್ವತಂತ್ರವಾಗಿ ಗೆಲ್ಲುವುದಿಲ್ಲ ಎಂಬುದು ಅರ್ಥ ಮಾಡಿಕೊಂಡು ಒಪ್ಪಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ಸ್ಪಷ್ಟವಾಗಿ ಹೇಳೆಬೇಕೆಂದರೆ ಜಗದೀಶ್ ಶೆಟ್ಟರ್ ನಮ್ಮ ಓಟ್ ಬ್ಯಾಂಕ್ ಅಲ್ಲ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಇನ್ನು ಕೆಲವು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿರುವುದರ ಹಿಂದಿನ ಕಾರಣವನ್ನೂ ತಿಳಿಸಿರುವ ಅಮಿತ್ ಶಾ, ಪಕ್ಷ ಒಂದು ನಿರ್ಧಾರ ಕೈಗೊಳ್ಳಬೇಕಾದರೆ ಅಲ್ಲಿ ಹಲವು ಅಂಶಗಳಿರುತ್ತವೆ. ಟಿಕೆಟ್ ನಿರಾಕರಿಸಿದ ಮಾತ್ರಕ್ಕೆ ಅವರು ಕಳಂಕಿತರು ಎಂಬುದು ಅರ್ಥವಲ್ಲ. ಪಕ್ಷದ ಎಲ್ಲಾ ನಾಯಕರೂ ಗೌರವಕ್ಕೆ ಅರ್ಹರು. ಟಿಕೆಟ್ ಯಾವ ಕಾರಣಕ್ಕಾಗಿ ಕೊಟ್ಟಿಲ್ಲ ಎಂಬುದನ್ನು ಟಿಕೆಟ್ ವಂಚಿತರೊಂದಿಗೇ ನಾವು ಮಾತನಾಡಿದ್ದೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಇದನ್ನೂ ಓದಿ: ಈ ಬಾರಿಯು ಜನಾದೇಶ 'ಅತಂತ್ರ': ಬಿಜೆಪಿಗೆ ಪ್ಲಸ್ ಹೊಸಮುಖಗಳ ತಂತ್ರ? ಪಕ್ಷದ ಪರ ಒಲವು, ಶಾಸಕರ ವಿರುದ್ಧ ಮತದಾರ ಪ್ರಭು ವ್ಯಗ್ರ!
ಪಕ್ಷದಲ್ಲಿ ಹೊಸತನ, ಪೀಳಿಗೆಯ ಬದಲಾವಣೆಯ ದೃಷ್ಟಿಯಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ, ಅದನ್ನು ಹೊರತುಪಡಿಸಿ ಕಳಂಕಿತರೆಂಬ ಕಾರಣಕ್ಕೆ ಟಿಕೆಟ್ ನೀಡಿಲ್ಲ ಎಂಬ ಊಹಾಪೋಹಗಳಿಗೆ ಅವಕಾಶವಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.