ಕೊಡಗು: ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆಯುವ ವೇಳೆ ನೀರಿಗೆ ಬಿದ್ದು ಬೆಂಗಳೂರಿನ ವ್ಯಕ್ತಿ ಸಾವು
ಮಡಿಕೇರಿ: ಪ್ರವಾಸಿಗರೊಬ್ಬರು ಕೊಡಗಿನ ಹಾರಂಗಿ ಜಲಾಶಯದ ಕೆಳಭಾಗದ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ನೀರಿಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಪ್ರವಾಸಿಗನ ಪತ್ತೆಗಾಗಿ ಗುರುವಾರ ಸಂಜೆಯವರೆಗೂ ಶೋಧ ಕಾರ್ಯಾಚರಣೆ ಮುಂದುವರಿದಿತ್ತು.
ಬೆಂಗಳೂರಿನಿಂದ ಕೊಡಗಿಗೆ ಪ್ರವಾಸಕ್ಕೆ ತೆರಳಿದ್ದ ಸಂದೀಪ್, ಗೋವಿಂದರಾಜು, ರಾಮ್‌ಕುಮಾರ್ ಮತ್ತು ರಂಜಿತ್ ಅವರು ಇಂದು ಸಂಜೆ ನಾಲ್ವರು ಹಾರಂಗಿ ಸೇತುವೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ವೃತ್ತಿಯಲ್ಲಿ ಟ್ಯಾಟೂ ಕಲಾವಿದರಾಗಿರುವ ಸಂದೀಪ್(46) ಅವರು ಸೇತುವೆಯ ಅಂಚಿನಿಂದ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜಾರಿ ನೀರಿಗೆ ಬಿದ್ದಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಂದೀಪ್‌ಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಜಲಾಶಯದಿಂದ ನೀರು ಹೊರಬಿಡುವುದನ್ನು ನಿಲ್ಲಿಸಿದ್ದಾರೆ. ಘಟನೆ ನಡೆದಾಗ ಪ್ರವಾಸಿಗರು ಕುಡಿದ ಅಮಲಿನಲ್ಲಿದ್ದ ಶಂಕೆ ವ್ಯಕ್ತವಾಗಿದೆ.
ದುಬಾರೆಯಿಂದ ತೆಪ್ಪದ ತಂಡಗಳು ಆಗಮಿಸಿದ್ದು, ಶೋಧ ಕಾರ್ಯದಲ್ಲಿ ತೊಡಗಿವೆ ಎಂದು ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‌ಪಿ ಗಂಗಾಧರಪ್ಪ ಆರ್‌ವಿ ಅವರು ತಿಳಿಸಿದ್ದಾರೆ.
ಘಟನೆ ನಡೆದ ಸೇತುವೆಯನ್ನು ಸ್ಥಳೀಯರು ನಿತ್ಯ ಸಂಚಾರಕ್ಕೆ ಬಳಸುತ್ತಾರೆ. ಹಾರಂಗಿ ಜಲಾಶಯದಿಂದ ಹೊರಹರಿವು 15 ಸಾವಿರ ಕ್ಯೂಸೆಕ್‌ಗಿಂತ ಹೆಚ್ಚಾದಾಗ ಮಾತ್ರ ಸೇತುವೆ ಜಲಾವೃತಗೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.
ಘಟನೆ ನಡೆದ ಸಂದರ್ಭದಲ್ಲಿ ಜಲಾಶಯದಿಂದ ಹೊರಹರಿವು 2,000 ಕ್ಯೂಸೆಕ್‌ಗಿಂತ ಕಡಿಮೆಯಿತ್ತು ಎಂದು ಹಾರಂಗಿ ಇಇ ಖಚಿತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ