ಉಡುಪಿ ಕಾಲೇಜು ಶೌಚಾಲಯ ವಿಡಿಯೋ ಪ್ರಕರಣ: ಸಿಐಡಿ ತನಿಖೆ ಚುರುಕು!

ಉಡುಪಿಯ ನೇತ್ರ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಸಂತ್ರಸ್ತೆ ಹಾಗೂ ಕಾಲೇಜು ಆಡಳಿತ ಮಂಡಳಿಯ ಪ್ರತಿನಿಧಿಗಳ ಹೇಳಿಕೆ ಪಡೆದು ತನಿಖೆಯನ್ನು ತೀವ್ರಗೊಳಿಸಿದೆ.
ಸಿಐಡಿ ತಂಡ
ಸಿಐಡಿ ತಂಡ

ಮಂಗಳೂರು: ಉಡುಪಿಯ ನೇತ್ರ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯ ವಿಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಸಂತ್ರಸ್ತೆ ಹಾಗೂ ಕಾಲೇಜು ಆಡಳಿತ ಮಂಡಳಿಯ ಪ್ರತಿನಿಧಿಗಳ ಹೇಳಿಕೆ ಪಡೆದು ತನಿಖೆಯನ್ನು ತೀವ್ರಗೊಳಿಸಿದೆ. ಕಳೆದ ತಿಂಗಳು ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ  ಮೊಬೈಲ್ ಕ್ಯಾಮೆರಾ ಬಳಸಿ ಹಿಂದೂ ವಿದ್ಯಾರ್ಥಿನಿಯ ಖಾಸಗಿ ದೃಶ್ಯ ಚಿತ್ರೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಿಂದೂ ವಿದ್ಯಾರ್ಥಿನಿ ಔಪಚಾರಿಕವಾಗಿ ದೂರು ದಾಖಲಿಸದಿದ್ದರೂ, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಇತ್ತೀಚೆಗೆ ಸಿಐಡಿಗೆ ಹಸ್ತಾಂತರಿಸಿದ್ದರು. ಎಸ್ಪಿ ರಾಘವೇಂದ್ರ, ಡಿವೈಎಸ್ಪಿ ಅಂಜುಮಾಲಾ ನಾಯಕ್ ನೇತೃತ್ವದಲ್ಲಿ ಸಿಐಡಿ ಅಧಿಕಾರಿಗಳು ಆರೋಪಿ ವಿದ್ಯಾರ್ಥಿಗಳ ಹೇಳಿಕೆಯನ್ನೂ ಪಡೆದುಕೊಂಡಿದ್ದಾರೆ.  ಘಟನೆಯ ಸ್ಥಳದಲ್ಲಿ ದೃಶ್ಯವನ್ನು ಮರುಸೃಷ್ಟಿಸಲು ತಂಡವು ಸಜ್ಜಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ಕೂಡಾ ತಜ್ಞ ಸಿಬ್ಬಂದಿಯಿಂದ  ಸ್ಥಳ ಪರಿಶೀಲನೆ ಮೂಲಕ ತನಿಖೆಯಲ್ಲಿ ಸೇರಿಕೊಂಡಿದೆ.  ಘಟನೆ ನಡೆದ ಸ್ಥಳದಿಂದ ಬೆರಳಚ್ಚು ಸಂಗ್ರಹಿಸಲಾಗಿದೆ. ಸಿಐಡಿ ತಂಡ ಕಾಲೇಜಿನ ಸಿಬ್ಬಂದಿಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಮತ್ತು ಈ ಹಿಂದೆ ತನಿಖೆ ನಡೆಸಿದ ಜಿಲ್ಲಾ ಪೊಲೀಸರು ಒದಗಿಸಿದ ಸುತ್ತಮುತ್ತಲಿನ ಕ್ಯಾಮೆರಾಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ.

ಮೂವರು ಆರೋಪಿಗಳ ಮೊಬೈಲ್ ಫೋನ್‌ಗಳನ್ನು ಹೈದರಾಬಾದ್‌ನಲ್ಲಿರುವ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ಪ್ರಾಥಮಿಕ ವಿಡಿಯೋ ಸಾಕ್ಷ್ಯಾಧಾರಗಳ ಅನುಪಸ್ಥಿತಿಯು ವಿವಾದದ ಸುತ್ತಲಿನ ಸ್ಪಷ್ಟತೆಯ ಕೊರತೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಸಿಐಡಿ ಎಡಿಜಿಪಿ ಮನೀಶ್ ಕರ್ಬಿಕರ್ ಉಡುಪಿಗೆ ಆಗಮಿಸಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೇ ಅಕ್ಷಯ್ ಮಚ್ಚಿಂದ್ರ ಹಾಗೂ ಸಿಐಡಿ ಎಸ್ಪಿ ರಾಘವೇಂದ್ರ ಹೆಗ್ಡೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಸಿಐಡಿ ಡಿವೈಎಸ್ಪಿ ಅಂಜುಮಾಲಾ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ತನಿಖಾಧಿಕಾರಿಗೆ ಹಸ್ತಾಂತರಿಸಲಾಗುವುದು. ತನಿಖೆಯ ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು. ಸಿಐಡಿ ತಂಡವು ತನಿಖೆಯ ಭಾಗವಾಗಿ ಮೂರು ಮೊಬೈಲ್ ಎಫ್‌ಎಸ್‌ಎಲ್ ವರದಿಗಳನ್ನು ಸಹ ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com