ವಿವಿ ಗಳ ಎಸ್ ಸಿ-ಎಸ್ ಟಿ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಗೆ 230 ಕೋಟಿ ರೂ. ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ
ವಿಶ್ವವಿದ್ಯಾಲಯಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅನ್ನು ಎಸ್.ಪಿ.ಎಸ್.ಪಿ./ಟಿ.ಎಸ್.ಪಿ. ಅಡಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
Published: 21st August 2023 08:38 PM | Last Updated: 21st August 2023 08:55 PM | A+A A-

ಲ್ಯಾಪ್ ಟಾಪ್
ಬೆಂಗಳೂರು: ವಿಶ್ವವಿದ್ಯಾಲಯಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅನ್ನು ಎಸ್.ಪಿ.ಎಸ್.ಪಿ./ಟಿ.ಎಸ್.ಪಿ. ಅಡಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಶ್ವ ವಿದ್ಯಾಲಯಗಳ ಕುಲಪತಿಗಳು ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.
ಲ್ಯಾಪ್ ಟಾಪ್ ವಿತರಿಸುವ ಸಂಬಂಧ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ. ಅಡಿ 230 ಕೋಟಿ ರೂ. ಒದಗಿಸುವಂತೆ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ಸಭೆ ನಡೆಯುವಾಗಲೇ ದೂರವಾಣಿ ಮೂಲಕ ಸೂಚನೆ ನೀಡಿದರು.
ವಿವಿಗಳಲ್ಲಿರುವ ಎಲ್ಲಾ ಸಮುದಾಯಗಳ ಪ್ರತಿ ವಿದ್ಯಾರ್ಥಿಗಳಿಗೂ ಲ್ಯಾಪ್ ಟಾಪ್ ವಿತರಿಸಬೇಕಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಪ್ರವಾಹದಿಂದ ತತ್ತರಿಸಿದ ಹಿಮಾಚಲ ಪ್ರದೇಶಕ್ಕೆ ಕರ್ನಾಟಕ ನೆರವು: 15 ಕೋಟಿ ರೂ. ಬಿಡುಗಡೆಗೆ ಸಿಎಂ ಸಿದ್ದರಾಮಯ್ಯ ಆದೇಶ
ರಾಜ್ಯದ ವಿವಿಗಳಲ್ಲಿ ಮಂಜೂರಾದ ಹುದ್ದೆಗಳ ಶೇ. 50 ಕ್ಕೂ ಹೆಚ್ಚು ಖಾಲಿ ಇದ್ದು, 1882 ಹುದ್ದೆಗಳಷ್ಟೇ ಭರ್ತಿಯಾಗಿವೆ. ವಿಶ್ವವಿದ್ಯಾಲಯಗಳ ಸಂಪನ್ಮೂಲದಿಂದಲೇ 2865 ಅತಿಥಿ ಉಪನ್ಯಾಸಕರಿಗೆ ವೇತನ ಭರಿಸುವ ಕಾರಣ, ಅವರಿಗೆ ಆರ್ಥಿಕ ಹೊರೆಯಾಗಿದೆ ಎಂಬುದನ್ನು ಕುಲಪತಿಗಳು ಮತ್ತು ಅಧಿಕಾರಿಗಳು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.
ನಿವೃತ್ತಿ ವೇತನ ವಿತರಣೆಯಲ್ಲಿ ಹಳೆಯ ವಿವಿಗಳು ವಿಭಜನೆಯಾದರೂ ಹಳೆಯ ವಿವಿಗಳು ಮಾತ್ರ ನಿವೃತ್ತಿ ವೇತನ ಪಾವತಿಸುತ್ತಿದ್ದಾರೆ. ಇದರಿಂದ ಹಳೆಯ ವಿವಿಗಳ ಆರ್ಥಿಕ ಹೊರೆ ಹೆಚ್ಚಾಗಿದೆ. ಪ್ರಸಕ್ತ ಆಯವ್ಯಯದಲ್ಲಿ ಒಟ್ಟಾರೆಯಾಗಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ 5470 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, 2474 ಕೋಟಿ ರೂ. ಹೆಚ್ಚುವರಿ ಅನುದಾನದ ಅಗತ್ಯವಿದೆ ಎಂದು ಕುಲಪತಿಗಳು ಮುಖ್ಯಮಂತ್ರಿಗಳಿಗೆ ಸಮಸ್ಯೆ ಹೇಳಿಕೊಂಡರು.
ಇದನ್ನೂ ಓದಿ: ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಪ್ರತ್ಯೇಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
ಆಯವ್ಯಯ ಹಂಚಿಕೆ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ನಾವು ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸಲು ಹೇಗೆ ಸಾಧ್ಯ? ಇದಲ್ಲದೆ ಉನ್ನತ ಶಿಕ್ಷಣ ಇಲಾಖೆಯ ಆಯವ್ಯಯದಲ್ಲಿ ಶೇ. 88 ರಷ್ಟು ಅನುದಾನ ವೇತನಕ್ಕೆ ಬಳಕೆಯಾಗುತ್ತಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯು ಕೈಗಾರಿಕೋದ್ಯಮಗಳ ಬೇಡಿಕೆಗೆ ಅನುಗುಣವಾದ ಪಠ್ಯಕ್ರಮ ರೂಪಿಸಿ, ಎಂಜಿನಿಯರಿಂಗ್ ಪದವೀಧರರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲು ಅನುವಾಗುವಂತಹ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.