ಯಾದಗಿರಿ: 21 ವರ್ಷಗಳ ನಂತರ ಚೆನ್ನೂರಿನ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ!

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಚೆನ್ನೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 21 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸವಿದರು. ಮಧ್ಯಾಹ್ನ ಉಪಾಹಾರ ಯೋಜನೆ ಅನುಷ್ಠಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಶ್ರಮದಿಂದಾಗಿ ಬುಧವಾರ ವಿದ್ಯಾರ್ಥಿಗಳು ಊಟದ ಸವಿ ಸವಿದರು.
ಚೆನ್ನೂರಿನ ಪ್ರಾಥಮಿಕ ಶಾಲೆ ಮಕ್ಕಳು ಬಿಸಿಯೂಟ ಸವಿದ ಚಿತ್ರ
ಚೆನ್ನೂರಿನ ಪ್ರಾಥಮಿಕ ಶಾಲೆ ಮಕ್ಕಳು ಬಿಸಿಯೂಟ ಸವಿದ ಚಿತ್ರ
Updated on

ಯಾದಗಿರಿ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಚೆನ್ನೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು 21 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಮಧ್ಯಾಹ್ನದ ಬಿಸಿಯೂಟವನ್ನು ಸವಿದರು. ಮಧ್ಯಾಹ್ನ ಉಪಾಹಾರ ಯೋಜನೆ ಅನುಷ್ಠಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಶ್ರಮದಿಂದಾಗಿ ಬುಧವಾರ ವಿದ್ಯಾರ್ಥಿಗಳು ಊಟದ ಸವಿ ಸವಿದರು.

2002 ರಲ್ಲಿ ಶಾಲೆಯಲ್ಲಿ ಯೋಜನೆ ಪ್ರಾರಂಭಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ ಗ್ರಾಮದ ಎರಡು ಜಾತಿಗಳ ಮುಖಂಡರ ನಡುವೆ ಸಹಾಯಕ ಅಡುಗೆಯವರನ್ನು ನೇಮಿಸುವ ಬಗ್ಗೆ ಭಿನ್ನಾಭಿಪ್ರಾಯದಿಂದಾಗಿ ಯೋಜನೆಯು ವಿಫಲವಾಗಿತ್ತು.  ಈ ವಿಚಾರ ಎರಡು ಜಾತಿಯ ಸದಸ್ಯರ ನಡುವೆ ಘರ್ಷಣೆಗೆ ಕಾರಣವಾಗಿದ್ದು, ಒಬ್ಬ ವ್ಯಕ್ತಿಯ ಹತ್ಯೆಯಾಗಿತ್ತು.  ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ರ ಅಡಿಯಲ್ಲಿ ಪ್ರಕರಣ ದಾಖಲಾಗಿ ಹಲವು, ವರ್ಷಗಳ ಕಾಲ ಪ್ರಕರಣ ಮುಂದುವರೆಯಿತು. ಈ ಬೆಳವಣಿಗೆಗಳಿಂದಾಗಿ ಅಧಿಕಾರಿಗಳು ಚೆನ್ನೂರಿನಲ್ಲಿ ಊಟದ ಯೋಜನೆಯನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಯಾದಗಿರಿ ಜಿಲ್ಲೆಯ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಧಿಕಾರಿ ನೀರಡಿಗಿ ಈಶ್ವರಪ್ಪ, ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಸಂಯೋಜಕ ಚಿತ್ರಶೇಖರ್ ದೇಗಲಮಡಿ, ಹದಿನೈದು ದಿನಗಳ ಹಿಂದೆ ಚೆನ್ನೂರಿಗೆ ತೆರಳಿ ಎರಡು ಜಾತಿಯ ಹೋರಾಟಗಾರರ ಮುಖಂಡರನ್ನು ಭೇಟಿ ಮಾಡಿದ್ದು,ಹಲವು ಸುತ್ತಿನ ಮಾತುಕತೆ ಮೂಲಕ ಶಾಲಾ ಮಕ್ಕಳ ಹಿತದೃಷ್ಟಿಯಿಂದ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಶಾಲೆಯಲ್ಲಿ ಯೋಜನೆ ಆರಂಭಿಸುವ ನಿರ್ಧಾರಕ್ಕೆ ಎರಡು ಜಾತಿಗಳ ಮುಖಂಡರು ಒಪ್ಪಿಗೆ ಸೂಚಿಸಿದ್ದಾಗಿ  ಈಶ್ವರಪ್ಪ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ  ತಿಳಿಸಿದರು. ಅದರಂತೆ ಎರಡು ಜಾತಿಯ ಮುಖಂಡರ ಸಮ್ಮುಖದಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. 45 ವಿದ್ಯಾರ್ಥಿಗಳ ಪೈಕಿ 28 ವಿದ್ಯಾರ್ಥಿಗಳು ಹಾಜರಿದ್ದು, ವಿಶೇಷವಾಗಿ ತಯಾರಿಸಿದ ಊಟವನ್ನು ಸವಿದರು. ಚಿತ್ರಶೇಖರ್, ಪ್ರಭಾರಿ ಬಿಇಒ ಚಂದ್ರಕಾಂತ್ ಕೊಣ್ಣೂರ ಹಾಗೂ ಗ್ರಾಮದ ಮುಖಂಡರು ಸಹ ಊಟ ಸವಿದಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು. 

ಮೊದಲ ದಿನ ಅನ್ನ, ಸಾಂಬಾರು, ಮೊಟ್ಟೆ, ಬಾಳೆಹಣ್ಣು ನೀಡಲಾಯಿತು.  ತಮ್ಮ ಗ್ರಾಮದ ಶಾಲೆಯಲ್ಲಿ ಯೋಜನೆ ಜಾರಿಗೊಳಿಸಿದ್ದಕ್ಕೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.


ಶಾಲೆಗೆ ಒಬ್ಬರೇ ಶಿಕ್ಷಕರಿದ್ದು, ಅವರು ಮುಖ್ಯೋಪಾಧ್ಯಾಯರೂ ಆಗಿದ್ದು, ಹದಿನೈದು ದಿನದೊಳಗೆ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 1,079 ಶಾಲೆಗಳು ಬಿಸಿಯೂಟದ ಯೋಜನೆಯಡಿಯಲ್ಲಿವೆ.
ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ವಿದ್ಯಾರ್ಥಿಗಳು, ತಮ್ಮ ಶಾಲೆಗೆ ಕನಿಷ್ಠ ಇಬ್ಬರು ಶಿಕ್ಷಕರನ್ನಾದರೂ ನೇಮಿಸುವಂತೆ ಮನವಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com