ಚಂದ್ರನ ಮೇಲೆ 'ವಿಕ್ರಮ'ಸಾಧನೆ ತೋರಿದ ನಿಮ್ಮ ಪರಿಶ್ರಮಕ್ಕೆ ನನ್ನ ದೊಡ್ಡ ಸೆಲ್ಯೂಟ್: ಇಸ್ರೊ ವಿಜ್ಞಾನಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ ಪ್ರಧಾನಿ ಮೋದಿ

ಚಂದ್ರಯಾನ-3 ಮಿಷನ್ ಯಶಸ್ಸು ಭಾರತ ಸೇರಿದಂತೆ ಇಡೀ ವಿಶ್ವದ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು, ಇಸ್ರೊ ವಿಜ್ಞಾನಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ, ಇಸ್ರೊ ವಿಜ್ಞಾನಿಗಳ ಪರಿಶ್ರಮಕ್ಕೆ, ಸಮರ್ಪಣಾ ಮನೋಭಾವಕ್ಕೆ ನನ್ನದೊಂದು ದೊಡ್ಡ ಸೆಲ್ಯೂಟ್. ವಿಜ್ಞಾನಿಗಳ ಈ ಸಾಧನೆಯಿಂದ ನಾನು ಬಹಳ ಖುಷಿಯಾಗಿದ್ದೇನೆ, ಇಂದು ಇಡೀ ದೇಶವೇ ಹೆಮ್ಮೆಪಡುವಂತೆ ನೀವು ಮಾಡಿದ್ದೀರಿ ಎಂದ
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ಬೆಂಗಳೂರು: ಚಂದ್ರಯಾನ-3 ಮಿಷನ್ ಯಶಸ್ಸು ಭಾರತ ಸೇರಿದಂತೆ ಇಡೀ ವಿಶ್ವದ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು, ಇಸ್ರೊ ವಿಜ್ಞಾನಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ, ನಿಮ್ಮ ತಾಳ್ಮೆ, ನಿಮ್ಮ ಶ್ರದ್ಧೆ, ನಿಮ್ಮ ಉತ್ಸಾಹಕ್ಕೆ ಸಲಾಂ. ಈ ಯಶಸ್ಸು ಸಾಮಾನ್ಯವಲ್ಲ ವಿಜ್ಞಾನಿಗಳ ಈ ಸಾಧನೆಯಿಂದ ನಾನು ಬಹಳ ಖುಷಿಯಾಗಿದ್ದೇನೆ, ಇಂದು ಇಡೀ ದೇಶವೇ ಹೆಮ್ಮೆಪಡುವಂತೆ ನೀವು ಮಾಡಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೊ ಕಮಾಂಡೊ ಕೇಂದ್ರಕ್ಕೆ ಭೇಟಿ ನೀಡಿ ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ಸೇರಿದಂತೆ ಇಡೀ ಇಸ್ರೊ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಬಳಿಕ ಅವರನ್ನುದ್ದೇಶಿಸಿ ಮಾತನಾಡಿದರು.

ನಿಮ್ಮನ್ನೆಲ್ಲಾ ಇಂದು ಭೇಟಿ ಮಾಡಿದ್ದು ನನಗೆ ಬಹಳ ಸಂತೋಷವಾಗಿದೆ. ಭಾರತದ ವಿಜ್ಞಾನ ಸಾಧನೆಯನ್ನು ಇಂದು ಇಡೀ ದೇಶ ಕೊಂಡಾಡುತ್ತಿದೆ. ನನ್ನ ತನು-ಮನ ಸಂತೋಷದಿಂದ ಉಕ್ಕುತ್ತಿದೆ. ದೇಶದ ಘನತೆಯನ್ನು ಉತ್ತುಂಗಕ್ಕೆ ಏರಿಸಿದ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು ಎಂದರು.

ಇದಕ್ಕೂ ಮುನ್ನ ಇಸ್ರೊ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿಯವರನ್ನು ಇಸ್ರೊ ಮುಖ್ಯಸ್ಥ ಎಸ್ ಸೋಮನಾಥ್ ಸೇರಿದಂತೆ ಅವರ ತಂಡ ಸ್ವಾಗತಿಸಿದರು. ಸೋಮನಾಥ್ ಅವರ ಬೆನ್ನುತಟ್ಟಿ ಪ್ರಧಾನಿಯವರು ಅಭಿನಂದಿಸಿದರು.

Chandrayan3 ರಲ್ಲಿ ಮಹಿಳಾ ವಿಜ್ಞಾನಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಚಂದ್ರನ ಮೇಲೆ ಲ್ಯಾಂಡರ್ ಇಳಿದ ಕೇಂದ್ರವನ್ನು ಇನ್ನು ಮುಂದೆ 'ಶಿವಶಕ್ತಿ' ಪಾಯಿಂಟ್ ಎಂದು ಹೆಸರಿಸೋಣ. ಈ ಚಂದ್ರಯಾನ ಮುಂಬರುವ ಪೀಳಿಗೆಗೆ ವಿಜ್ಞಾನವನ್ನು ಜನರ ಕಲ್ಯಾಣಕ್ಕಾಗಿ ಬಳಸಲು ಪ್ರೇರೇಪಿಸುತ್ತದೆ. ಜನರ ಕಲ್ಯಾಣ ನಮ್ಮ ಪರಮೋಚ್ಚ ಬದ್ಧತೆಯಾಗಿದೆ ಎಂದು ಪ್ರಧಾನಿ ಉಚ್ಛರಿಸಿದರು. 

ನಂತರ ಇಸ್ರೊ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ ಮಿಷನ್ ಕಂಟ್ರೋಲ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಯಂತ್ರೋಪಕರಣಗಳ ಕಾರ್ಯವಿಧಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಇದಕ್ಕೂ ಮುನ್ನ ಪ್ರಧಾನ ಮಂತ್ರಿಗಳು ಹೆಚ್ ಎಎಲ್ ವಿಮಾನ ನಿಲ್ದಾಣದಿಂದ ಪೀಣ್ಯದಲ್ಲಿರುವ ಇಸ್ರೊ ಕೇಂದ್ರಕ್ಕೆ ಕಾರಿನಲ್ಲಿ ತೆರಳುವಾಗ ಕಿಕ್ಕಿರಿದು ಸೇರಿದ್ದ ಜನಸ್ತೋಮದತ್ತ ಕೈಬೀಸುತ್ತಾ ಸಾಗಿದರು. ರಸ್ತೆಯ ಇಕ್ಕೆಲಗಳಲ್ಲಿ ಪ್ರಧಾನ ಮಂತ್ರಿಗಳನ್ನು ನೋಡಲು ಜನರು ಜಮಾಯಿಸಿದ್ದರು.

ಕೇಂದ್ರ, ರಾಜ್ಯ ಸರ್ಕಾರ ಸಹಯೋಗದಲ್ಲಿ ಬಾಹ್ಯಾಕಾಶ, ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ ರಾಷ್ಟ್ರಮಟ್ಟದ ಹ್ಯಾಕಥಾನ್ ಆಯೋಜಿಸಲಾಗುವುದು. ಇಸ್ರೋ ವಿಜ್ಞಾನಿಗಳು ಹಲವು ಉಪಗ್ರಹ ಉಡಾವಣೆ ಮಾಡಿದ್ದಾರೆ. ಈ ಉಪಗ್ರಹಗಳ ನೆರವಿನಿಂದ ಹಲವು ಕ್ಷೇತ್ರಗಳಿಗೆ ಅನುಕೂಲ ಆಗ್ತಿದೆ. ಕೃಷಿ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಿಗೆ ಅನುಕೂಲವಾಗುತ್ತಿದೆ. ತಂತ್ರಜ್ಞಾನ ಬೆಳವಣಿಗೆಯಾದರೆ ದೇಶ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಮೋದಿ ಹೇಳಿದರು. ಚಂದ್ರಯಾನ ಕುರಿತು ರಸಪ್ರಶ್ನೆ ಸ್ಪರ್ಧೆ: ವಿಶ್ವವೇ ಭಾರತದ ವಿಜ್ಞಾನ, ತಂತ್ರಜ್ಞಾನವನ್ನು ಒಪ್ಪಿಕೊಂಡಿದೆ. ಮೇಕ್​ ಇನ್​ ಇಂಡಿಯಾ ಈಗ ಚಂದ್ರನವರೆಗೂ ತಲುಪಿದೆ. ಇದು ನಮಗೆ ಹೆಮ್ಮೆಯ ವಿಚಾರ. ಚಂದ್ರಯಾನದ ಕುರಿತು ಕ್ವಿಜ್ ಸ್ಪರ್ಧೆ ಏರ್ಪಡಿಸಲಾಗುವುದು. ದೇಶದ ಎಲ್ಲಾ ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸಿ ಎಂದು ಪ್ರಧಾನಿ ಕರೆನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com