ಹಿಜಾಬ್ ನಮ್ಮ ಘನತೆ ಎಂಬ ಗೋಡೆ ಬರಹ: ಇಬ್ಬರು ಯುವಕರ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: ಹಿಜಾಬ್ ನಮ್ಮ ಘನತೆ ಎಂದು ಶಾಲೆಯ ಗೋಡೆಗಳ ಮೇಲೆ ಬರೆದಿದ್ದ ಇಬ್ಬರು ಯುವಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ಮಾರ್ಚ್ 16, 2022 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಗೋಡೆ ಮೇಲೆ ಹಿಜಾಬ್ ನಮ್ಮ ಘನತೆ ಎಂಬ ಬರಹ ಬರೆಯಲಾಗಿತ್ತು.
ಈ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಹೊಸಪೇಟೆಯ ಮುಝಮ್ಮಿಲ್(23) ಮತ್ತು ಮೊಹಮ್ಮದ್ ಜಮಾವುಲ್ (25) ಎಂಬುವರ ವಿರುದ್ಧ ಕರ್ನಾಟಕ ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಹೊಸಪೇಟೆ ನಗರ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸಿ, ಇಬ್ಬರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನಂತರ ಇಬ್ಬರು ಆರೋಪಿಗಳು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ಕರ್ನಾಟಕ ತೆರೆದ ಸ್ಥಳಗಳ ಕಾಯ್ದೆಯಡಿ ವಿಜಯನಗರ ಜಿಲ್ಲೆಗೆ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ ಈ ಕಾಯ್ದೆ ಹೊಸಪೇಟೆ ಪಟ್ಟಣಕ್ಕೆ ಅನ್ವಯವಾಗುವುದಿಲ್ಲ. ಕಾಯ್ದೆ ಹೊಸಪೇಟೆಗೆ ಅನ್ವಯಿಸಲು ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ ಎಂದು ಆರೋಪಿಗಳ ಪರ ವಕೀಲರು ಕೋರ್ಟ್ ಮುಂದೆ ವಾದ ಮಂಡಿಸಿದ್ದಾರೆ. ಇದನ್ನು ಆಲಿಸಿದ ಕೋರ್ಟ್, ಅರ್ಜಿದಾರರ ವಾದ ಪುರಸ್ಕರಿಸಿ ಕೇಸ್ ರದ್ದುಗೊಳಿಸಿ ಆದೇಶ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ