ಈ ವರ್ಷ 'ನಾದ ಬ್ರಹ್ಮ' ಹಂಸಲೇಖರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ವಿಶ್ವಪ್ರಸಿದ್ಧ ಮೈಸೂರು ದಸರಾವನ್ನು (Mysuru Dasara) ಈ ವರ್ಷ 'ನಾದಬ್ರಹ್ಮ' ಎಂದು ಕರೆಯಲ್ಪಡುವ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಹಂಸಲೇಖ(ಸಂಗ್ರಹ)
ಹಂಸಲೇಖ(ಸಂಗ್ರಹ)

ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾವನ್ನು (Mysuru Dasara) ಈ ವರ್ಷ 'ನಾದಬ್ರಹ್ಮ' ಎಂದು ಕರೆಯಲ್ಪಡುವ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಈ ಬಾರಿ ಕೂಡ ಮೈಸೂರು ದಸರಾವನ್ನು ಸಾಂಪ್ರದಾಯಿಕಬದ್ಧವಾಗಿ ಆಚರಿಸಲಾಗುವುದು ಎಂದು ಹೇಳಿದರು. 

ಅಕ್ಟೋಬರ್ 15ಕ್ಕೆ ದಸರಾ ಉದ್ಘಾಟನೆ: ದಸರಾ ಅಕ್ಟೋಬರ್​ 15 ರ ಬೆಳಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ಉದ್ಘಾಟನೆ ನೆರವೇರಲಿದ್ದು, ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅಲ್ಲದೇ ಈ ಬಾರಿ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಲಿದೆ ಎಂದು ಹೇಳಿದರು. 

ಮೈಸೂರಿನ 119 ವೃತ್ತಗಳಲ್ಲಿ ಅಂದರೇ ಬರೋಬ್ಬರಿ 135 ಕಿ.ಮೀ ರಸ್ತೆಗೆ ವಿದ್ಯುತ್ ದೀಪಾಲಂಕಾರ ಮಾಡಲು ತೀರ್ಮಾನಿಸಲಾಗಿದೆ. ಕೆ.ಆರ್.ವೃತ್ತ, ಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ಗನ್​ಹೌಸ್ ವೃತ್ತ, ಎಲ್​ಐಸಿ ವೃತ್ತ ಸೇರಿ ನಗರದ ಹಲವು ಕಡೆ ದೀಪಾಲಂಕಾರ, ಮೈಸೂರಿನ ಸರ್ಕಾರಿ ಕಟ್ಟಡಗಳಿಗೂ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ ಎಂದರು.

ನಾಳೆ ಗೃಹಲಕ್ಷ್ಮಿ ಯೋಜನೆ ಚಾಲನೆ: ನಾಳೆ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆ ಚಾಲನೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಭಾರೀ ಸಿದ್ಧತೆ ನಡೆಯುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರು ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಹರಕೆ ತೀರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಜತೆಗಿನ ತಮ್ಮ ಸಂಬಂಧದ ಬಗ್ಗೆ ವಿರೋಧ ಪಕ್ಷಗಳ ನಾಯಕರು ನೀಡುವ ಹೇಳಿಕೆಗಳು, ಮಾಧ್ಯಮಗಳಲ್ಲಿ ಆಗಾಗ ಬರುವ ಸುದ್ದಿಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವಿರೋಧ ಪಕ್ಷಗಳು ನಮ್ಮನ್ನು ದೂರ ಮಾಡಲು ಎಷ್ಟೇ ಪ್ರಯತ್ನ ಮಾಡಿದರೂ ನಾವಿಬ್ಬರು ಇನ್ನಷ್ಟು ಹತ್ತಿರವಾಗುತ್ತಿದ್ದೇವೆ ಎಂದರು.

ಚಾಮುಂಡಿ ದೇವಿಗೆ ಹರಕೆ: ನಾಳೆ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಹಿನ್ನೆಲೆಯಲ್ಲಿ ಯಶಸ್ವಿಯಾಗಬೇಕೆಂದು ಆಶಿಸಿ ಸಿಎಂ, ಡಿಸಿಎಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಹಲವರು ಇಂದು ಬೆಳಗ್ಗೆಯೇ ಚಾಮುಂಡಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಚಾಮುಂಡಿ ದೇವಿಯ ಗರ್ಭಗುಡಿ ಮುಂದೆ ಗೃಹಲಕ್ಷ್ಮಿ ಗ್ಯಾರಂಟಿ ಕಾರ್ಡನ್ನಿಟ್ಟು, ಸೀರೆ ಜತೆಗೆ ಕನಕಾಂಬರ, ಮಲ್ಲಿಗೆ ಹಾಗೂ ಗುಲಾಬಿ ಹೂವಿನ ಹಾರವನ್ನು ಸಲ್ಲಿಸಿದರು. ಬಾಳೆಹಣ್ಣು ಮತ್ತು ದಾಳಿಂಬೆ ಹಣ್ಣನ್ನೂ ಸಮರ್ಪಿಸಿದರು. ಗ್ಯಾರಂಟಿ ಕಾರ್ಡ್‌ ಜತೆಗೆ ಸಿಎಂ ಮತ್ತು ಡಿಸಿಎಂ ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com