ಅಂಬಲಿ ಹಳಸಿತು- ಕಂಬಳಿ ಬೀಸಿತಲೇ ಪರಾಕ್: ಮೈಲಾರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಭವಿಷ್ಯ; ರಾಜ್ಯಕ್ಕೆ ಕುರುಬ ಮುಖ್ಯಮಂತ್ರಿ ಫಿಕ್ಸ್?

"ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್" ಇದು ಈ ವರ್ಷದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ.  ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಮಂಗಳವಾರ ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರಣಿಕ ಮಹೋತ್ಸವ ಜರುಗಿತು.
ಮೈಲಾರಲಿಂಗೇಶ್ವರ ಕಾರಣಿಕ
ಮೈಲಾರಲಿಂಗೇಶ್ವರ ಕಾರಣಿಕ

ವಿಜಯನಗರ: "ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್" ಇದು ಈ ವರ್ಷದ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿ. ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಮಂಗಳವಾರ ಸಂಜೆ ಲಕ್ಷಾಂತರ ಭಕ್ತರ ನಡುವೆ ಕಾರಣಿಕ ಮಹೋತ್ಸವ ಜರುಗಿತು.

ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶ್ವರೂಢರಾಗಿ ಡೆಂಕನ ಮರಡಿಗೆ ಆಗಮಿಸಿ ಕಾರಣಿಕ ಸ್ಥಳದಲ್ಲಿ ಪ್ರದಕ್ಷಿಣೆ ಹಾಕಿದರು. ಈ ಹಿಂದೆ ವಿಜಯನಗರದ ಅರಸರು ಮೈಲಾರಲಿಂಗ ಸ್ವಾಮಿಗೆ ಅರ್ಪಿಸಿದ್ದ ಮೂರ್ತಿಗಳ ಉತ್ಸವದೊಂದಿಗೆ ಗೊರವಯ್ಯ ರಾಮಣ್ಣ ಅವರನ್ನು ಸಿಂಹಾಸನ ಕಟ್ಟೆಯಿಂದ ಕಾರಣೀಕ ಸ್ಥಳಕ್ಕೆ ಗೊರವ ಸಮೂಹ ಭವ್ಯ ಮೆರವಣಿಗೆಯಲ್ಲಿ ಕರೆತಂದಿತು.

ಅಂಬಲಿ ಹಳಸಿತು- ಕಂಬಳಿ ಬೀಸಿತಲೇ ಪರಾಕ್’ ಎಂಬುದು 2023ನೇ ವರ್ಷದ ಶ್ರೀ ಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವ ಆಗಿದೆ.ಇದನ್ನು ರಾಜ್ಯದ ಒಂದು ವರ್ಷದ ಭವಿಷ್ಯವೆಂದೇ ಹೇಳಲಾಗುತ್ತದೆ. ಈ ದೈವ ನುಡಿಯ ಹಿನ್ನೆಲೆಯಲ್ಲಿ ವಿವಿಧ ರೀತಿಯಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ.

ಈ ವರ್ಷದ ಕಾರ್ಣಿಕೋತ್ಸವದಲ್ಲಿ 14 ಅಡಿ ಎತ್ತರದ ಬಿಲ್ಲು ಏರಿದ ಗೊರವಯ್ಯ ರಾಮಪ್ಪಜ್ಜ ದೈವ ವಾಣಿ ನುಡಿದಿದ್ದಾರೆ. ವಿಜಯನಗರ ಜಿಲ್ಲೆ ಮೈಲಾರದ ಡಂಕನಮರಡಿಯಲ್ಲಿ ಬಿಲ್ಲನ್ನು ಏರಿದ ಕಾರಣಿಕ ಗೊರವಯ್ಯ ಲಕ್ಷಾಂತರ ಭಕ್ತಾಧಿಗಳ ಸಮ್ಮುಖದಲ್ಲಿ ನಡೆದ ಕಾರ್ಣಿಕೋತ್ಸವ ನುಡಿದಿದ್ದಾರೆ. ‘ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್’ ಎಂಬುದು ಕಾರ್ಣಿಕೋತ್ಸವ ಆಗಿದ್ದು, ಇದನ್ನು ವಿವಿಧ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.

ಈ ವರ್ಷದ ಕಾರಣಿಕ ನುಡಿಯನ್ನು ಭಕ್ತರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದರು. "ಸ್ವಾಮಿಯ ನುಡಿಯಲ್ಲಿ ಮಿಶ್ರಫಲ ಅಡಗಿದೆ. ಮಳೆ, ಬೆಳೆ ಸಮೃದ್ದಿಯಾಗಿ ನಾಡು ಸುಭಿಕ್ಷೆಯಾಗಬಹುದು. ಮಳೆ ಹೆಚ್ಚಾಗಿ ಬೆಳೆಹಾನಿ ಸಂಭವಿಸುವ ಸಾಧ್ಯತೆಯೂ ಇದೆ. ಮುಂದಿನ ಚುನಾವಣೆಯಲ್ಲಿ ಒಂದೇ ಪಕ್ಷ ಸ್ಪಷ್ಟ ಬಹುಮತ ಪಡೆದು ಅಧಿಕಾರ ಹಿಡಿಯುವ ಸೂಚನೆ ಇದೆ" ಎಂದು ಹಿರಿಯರು ಕೃಷಿ, ರಾಜಕೀಯ, ವಾಣಿಜ್ಯ, ಸಾಮಾಜಿಕ ಕ್ಷೇತ್ರಗಳ ಮೇಲೆ ತಾಳೆ ಹಾಕಿ ವಿಶ್ಲೇಷಿಸುತ್ತಿದ್ದರು. ಸ್ವಾಮಿಯ ಉಕ್ತಿ ಶುಭದಾಯಕವಾಗಿದೆ ಎಂದು ಕೆಲವರು ಅರ್ಥೈಸಿದರು.

ಡೆಂಕಣಮರಡಿಯಲ್ಲಿ ಕಾರ್ಣಿಕ ವಿಶ್ಲೇಷಣೆ ಮಾಡಿದ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು, ರಾಜಕೀಯಕ್ಕೆ ಸಂಬಂಧಪಟ್ಟಂತೆ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಇರುವ ವ್ಯಕ್ತಿ ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ ಎಂಬುವುದಾಗಿ ಭಗವಂತ ದೈವವಾಣಿ ಮೂಲಕ ತಿಳಿಸಿರುವುದಾಗಿ ಹೇಳಿದರು.

ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಪಟ್ಟ ಸಿಗುತ್ತದೆ. ಪರೋಕ್ಷವಾಗಿ ಕುರುಬ ಸಮುದಾಯದ ವ್ಯಕ್ತಿಯೇ ರಾಜ್ಯವನ್ನಾಳುತ್ತಾರೆ ಎಂದು ಹೇಳಿದ್ದದರಿಂದ ರಾಜಕೀಯ ವಲಯದಲ್ಲಿ ಕಾರ್ಣಿಕ ನುಡಿ ತೀವ್ರ ಕುತೂಹಲ ಹುಟ್ಟುಹಾಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com