ಪುತ್ತೂರಿನ ಪಂಚಮುಖಿ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಮಿತ್ ಶಾ

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ರಾಜ್ಯಕ್ಕೆ ನಿರಂತರ ಭೇಟಿ ನೀಡುತ್ತಿರುವ ಕೇಂದ್ರ  ಗೃಹ ಸಚಿವ ಅಮಿತ್ ಶಾ ಮಂಗಳೂರಿಗೆ ಆಗಮಿಸಿದ್ದಾರೆ. 
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ

ಪುತ್ತೂರು:  ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ರಾಜ್ಯಕ್ಕೆ ನಿರಂತರ ಭೇಟಿ ನೀಡುತ್ತಿರುವ ಕೇಂದ್ರ  ಗೃಹ ಸಚಿವ ಅಮಿತ್ ಶಾ ಮಂಗಳೂರಿಗೆ ಆಗಮಿಸಿದ್ದಾರೆ. 

ಕೇರಳದ ಕಣ್ಣೂರು ವಿಮಾನ ನಿಲ್ದಾಣದಿಂದ ಭಾರತೀಯ ವಾಯುಸೇನೆ ಹೆಲಿಕಾಪ್ಟರ್ ನಲ್ಲಿ ಪುತ್ತೂರಿಗೆ ಆಗಮಿಸಿದ ಅಮಿತ್ ಶಾ, ಈಶ್ವರ ಮಂಗಲದ ಹನುಮಗಿರಿ ಪಂಚಮುಖಿ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಆಡಳಿತ ಮಂಡಳಿ ಅಮಿತ್ ಶಾ ಗೆ ಬೆಳ್ಳಿ ಗದೆ ನೀಡಿ ಸ್ವಾಗತಿಸಿತು.

ನಂತರ ಸುಮಾರು 2.5 ಎಕರೆ ಜಾಗದಲ್ಲಿ ನಿರ್ಮಿಸಿರುವ ಭಾರತ್ ಮಾತಾ ಮಂದಿರವನ್ನು ಅಮಿತ್ ಶಾ ಉದ್ಘಾಟಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮುಂದಿನ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ರಾಜ್ಯ ಬಿಜೆಪಿ ನಾಯಕರಿಗೆ ಟಾಸ್ಕ್ ನೀಡಿರುವ ಅಮಿತ್ ಶಾ, ಬಿಜೆಪಿಬ ಭದ್ರ ನೆಲೆಯಾಗಿರುವ ಕರಾವಳಿ ಮತ್ತು ಮಲೆನಾಡು ಭಾಗದ ಜಿಲ್ಲೆಗಳ ಪ್ರಮುಖ ಮುಖಂಡರೊಂದಿಗೆ ಇಂದು ಸಂಜೆ ಮಂಗಳೂರಿನಲ್ಲಿ ಸಭೆ ನಡೆಸಿ ಚುನಾವಣೆಗೆ ಸಂಬಂಧಿಸಿದಂತೆ ಕೆಲ ಸಲಹೆ-ಸೂಚನೆಗಳನ್ನು ನೀಡುವರು.

ಕ್ಯಾಂಪ್ಕೊ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಜೆ ಮಂಗಳೂರಿಗೆ ಆಗಮಿಸಿ ಮಂಗಳೂರಿನ ಹೊರ ವಲಯದ ಕೆಂಜಾರಿನಲ್ಲಿ ನಡೆಯುವ ಪಕ್ಷದ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳುವರು. ಅದಾದ ನಂತರ ಮಂಗಳೂರು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಪ್ರಮುಖ ಮುಖಂಡರ ಸಭೆ ನಡೆಸುವರು. ಈ ಕೋರ್ ಕಮಿಟಿ ಸಭೆಯಲ್ಲಿ ಈ 6 ಜಿಲ್ಲೆಗಳ 100ಕ್ಕೂ ಹೆಚ್ಚು ಪ್ರಮುಖ ಮುಖಂಡರುಗಳು ಪಾಲ್ಗೊಳ್ಳುವರು.

ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ನಂತರದ ಕರಾವಳಿಯ ರಾಜಕೀಯ ಬೆಳವಣಿಗೆಗಳೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಗಳು ನಡೆಯಲಿವೆ.

ಮುಂದಿನ ಚುನಾವಣೆಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬಿಜೆಪಿಯ ಭದ್ರ ನೆಲೆಯನ್ನು ಗಟ್ಟಿಗೊಳಿಸಿ ಬಿಜೆಪಿ ಸೋತಿರುವ ಕ್ಷೇತ್ರಗಳಲ್ಲೂ ಕಮಲ ಅರಳಿಸಲು ಚರ್ಚೆಗಳು ನಡೆಯಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com