ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆ ವೇಳೆ ಶರ್ಟ್ ತೆಗೆಯುವಂತೆ ಮಹಿಳೆಗೆ ಒತ್ತಾಯ: ಟ್ವಿಟರ್ ನಲ್ಲಿ ಆರೋಪ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆ ವೇಳೆ ಅಲ್ಲಿನ ಸಿಬ್ಬಂದಿ ಮಹಿಳೆಯೊಬ್ಬರಿಗೆ ಶರ್ಟ್ ತೆಗೆಯುವಂತೆ ಒತ್ತಾಯಿಸಿದ್ದು, ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಪರಿಶೀಲನೆ ವೇಳೆ ಅಲ್ಲಿನ ಸಿಬ್ಬಂದಿ ಮಹಿಳೆಯೊಬ್ಬರಿಗೆ ಶರ್ಟ್ ತೆಗೆಯುವಂತೆ ಒತ್ತಾಯಿಸಿದ್ದು, ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸ್ವತಃ ಮಹಿಳೆಯೇ ತಮಗೆ ಉಂಟಾದ ಅವಮಾನದ ಬಗ್ಗೆ ಟ್ವೀಟ್ ಮಾಡಿದ್ದು, ಸಿಬ್ಬಂದಿಯ ವರ್ತನೆಯನ್ನು ಖಂಡಿಸಿದ್ದಾರೆ.

ಕೃಷ್ಣಾನಿ ಗಾಧ್ವಿ ಎಂಬ ಮಹಿಳೆ ತಮ್ಮನ್ನು ವಿದ್ಯಾರ್ಥಿ ಹಾಗೂ ಸಂಗೀತ ಕಲಾವಿದೆ ಎಂದು ಹೇಳಿಕೊಂಡಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಭದ್ರತಾ ಪರಿಶೀಲನೆ ವೇಳೆ ನನಗೆ ಸಿಬ್ಬಂದಿ ಶರ್ಟ್ ತೆಗೆಯುವಂತೆ ಸೂಚಿಸಿದರು. ಸಿಬ್ಬಂದಿಯ ಈ ವರ್ತನೆಯಿಂದ ನನಗೆ ಬಹಳ ಮುಜುಗರ ಹಾಗೂ ಅವಮಾನವಾಗಿದೆ. ಕೇವಲ ಕ್ಯಾಮಿಸೋಲ್ (ಮಹಿಳೆಯರು ಧರಿಸುವ ಉಡುಪು)  ಧರಿಸಿ ಭದ್ರತಾ ಪರಿಶೀಲನೆ ಕೇಂದ್ರದ ಬಳಿ ನಿಂತು ಮಹಿಳೆಯರಿಗೆ ಕಿರಿಕಿರಿ ಉಂಟುಮಾಡುವ ರೀತಿಯ ವರ್ತನೆಗಳನ್ನು ಎದುರಿಸುವುದು ಅವಮಾನಕರ ಸಂಗತಿಯಾಗಿದೆ. ಭದ್ರತಾ ಪರಿಶೀಲನೆ ವೇಳೆ ಮಹಿಳೆಯರು ಶರ್ಟ್ ನ್ನು ಏಕೆ ತೆಗೆಯಬೇಕು? ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟ್ವೀಟ್ ಖಾತೆಗೆ ಟ್ಯಾಗ್ ಮಾಡಿ ಸಂತ್ರಸ್ತ ಮಹಿಳೆ ಅಸಮಾಧಾನ ಹೊರಹಾಕಿದ್ದಾರೆ.

ಈ ಟ್ವೀಟ್ ನಲ್ಲಿ ಆ ಮಹಿಳೆ ಯಾವ ವಿಮಾನ ಸಂಸ್ಥೆಯ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು, ಗಮ್ಯ ಸ್ಥಳ ಯಾವುದು? ಪ್ರಯಾಣದ ದಿನಾಂಕ ಏನು? ಮುಂತಾದವುಗಳ ಬಗ್ಗೆ ಮಾಹಿತಿ ಇಲ್ಲ.

ಭದ್ರತಾ ಏಜೆನ್ಸಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಮಹಿಳೆಯ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಹೇಳಿವೆ ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಅಥವಾ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಏಕೆ ಮಹಿಳೆ ದೂರು ದಾಖಲಿಸಿಲ್ಲ? ಎಂದು ಏಜೆನ್ಸಿಗಳು ಪ್ರಶ್ನಿಸಿವೆ

ಆದರೂ ಮಹಿಳೆಗೆ ಉಂಟಾಗಿರುವ ಅಸಹನೀಯ ಪರಿಸ್ಥಿತಿಯ ಬಗ್ಗೆ ವಿಮಾನ ನಿಲ್ದಾಣದ ಏರ್ಪೋರ್ಟ್ ಆಪರೇಟರ್ ನಿಂದ ವಿಷಾದ ವ್ಯಕ್ತವಾಗಿದೆ.

ಈ ಘಟನೆಯನ್ನು ಭದ್ರತಾ ತಂಡದ ಗಮನಕ್ಕೆ ತರಲಾಗಿದೆ. ಆಕೆಯ ಸಂಪರ್ಕ ವಿವರಗಳನ್ನು ನೀಡುವಂತೆ ಮನವಿ ಮಾಡಲಾಗಿದೆ ಎಂದು ಬಿಐಎಎಲ್ ತಿಳಿಸಿದೆ.

"ಪ್ರತಿ ನಿತ್ಯ ಲಕ್ಷಾಂತರ ಮಂದಿಯನ್ನು ಭದ್ರತಾ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಸಿಸಿಟಿವಿಯಲ್ಲಿ ಎಲ್ಲವೂ ದಾಖಲಾಗಿರುತ್ತದೆ. ನಿರ್ದಿಷ್ಟ ವಿವರಗಳನ್ನು ನೀಡದೇ ಮಹಿಳೆ ಆರೋಪ ಮಾಡಿದ್ದಾರೆ. ವಿವರಗಳನ್ನು ನೀಡಿದರೆ, ದೃಶ್ಯಾವಳಿಗಳನ್ನು ಪರಿಶೀಲಿಸುತ್ತೇವೆ. ಆಕೆ ದೂರು ನೀಡದೇ ಹೊರ ಪ್ರಪಂಚಕ್ಕೆ ಈ ಬಗ್ಗೆ ದೂರುತ್ತಿರುವುದೇಕೆ? ಅದು ಬೆಲ್ಟ್, ಜಾಕೆಟ್, ಕೋಟ್ ಅಥವಾ ಶೂ ಹೀಗೆ ಭದ್ರತಾ ಪರಿಶೀಲನೆಗೆ ಅಡ್ಡಿಯಾಗುವ ಯಾವುದೇ ಅಂಶವನ್ನಾದರೂ ಭದ್ರತಾ ಸಿಬ್ಬಂದಿಗಳು ತೆಗೆಯುವಂತೆ ಹೇಳುತ್ತಾರೆ" ಎಂದು ಭದ್ರತಾ ಪರಿಶೀಲನೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com