ಪಕ್ಷ ರಾಜಕಾರಣ ಬದಿಗಿಟ್ಟು ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಗೆ ದೇವೇಗೌಡರ ಹೆಸರಿಡಿ: ಶರವಣ ಪತ್ರ

ಈ ರಸ್ತೆ ಹಾದು ಹೋಗುವ ಉದ್ದಗಲಕ್ಕೂ ಇರುವ ಮಣ್ಣಿನ ಕಣಕಣದಲ್ಲೂ, ರೈತರ ಬೆವರ ಹನಿ ಶ್ರಮದಲ್ಲಿ ದೇವೇಗೌಡರ ಹೆಸರು ಅಭಿಮಾನದಿಂದ ರಾರಾಜಿಸುತ್ತಿದೆ.
ಶರವಣ ಮತ್ತು ಎಚ್ ಡಿ ದೇವೇಗೌಡ
ಶರವಣ ಮತ್ತು ಎಚ್ ಡಿ ದೇವೇಗೌಡ
Updated on

ಬೆಂಗಳೂರು: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಇದೀಗ ಹೆಸರಿನ ಕಿತ್ತಾಟಕ್ಕೆ ಒಳಗಾಗುವ ಲಕ್ಷಣಗಳು ಗೋಚರಿಸಿದೆ. ಈ ಹೆದ್ದಾರಿಗೆ ಮೈಸೂರು ರಾಜರ ಹೆಸರನ್ನು ಇಡಬೇಕು ಎಂಬ ಬಗ್ಗೆ ಈಗಾಗಲೇ ಕೆಲವರು ಪ್ರಸ್ತಾಪಿಸಿದ್ದು, ಅದರ ಬೆನ್ನಿಗೇ ದೇವೇಗೌಡರ ಹೆಸರಿಡಬೇಕು ಎಂಬ ಒತ್ತಾಯವೊಂದು ಕೇಳಿಬಂದಿದೆ. ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಈ ಕುರಿತು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು- ಮೈಸೂರು  ದಶಪಥ ಹೆದ್ದಾರಿ ವೀಕ್ಷಣೆಗೆ ಮತ್ತು ವೈಮಾನಿಕ ಸಮೀಕ್ಷೆಗೆ ರಾಜ್ಯಕ್ಕೆ ಧಾವಿಸಿರುವ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಮಂತ್ರಿಗಳಾದ ನಿತಿನ್ ಗಡ್ಕರಿ ಅವರೇ ಈ ಭಾಗದ ಜನರ ಭಾವನೆಗಳನ್ನು ನೀವು ಅರ್ಥ ಮಾಡಿಕೊಂಡಿದ್ದಾದರೆ ಈ ಹೆದ್ದಾರಿಗೆ ಮಾಜಿ ಪ್ರಧಾನಮಂತ್ರಿ, ಕರ್ನಾಟಕದ ಸಾಕ್ಷಿ ಪ್ರಜ್ಞೆಯಾಗಿರುವ ಮಾಜಿ ಪ್ರಧಾನಿ ದೇವೇಗೌಡರ ಹೆಸರಿಡಿ ಎಂದು ವಿಧಾನ ಪರಿಷತ್ ಸದಸ್ಯ ಟಿ. ಎ.ಶರವಣ ಮನವಿ ಮಾಡಿದ್ದಾರೆ.

ಈ ರಸ್ತೆ ಹಾದು ಹೋಗುವ ಉದ್ದಗಲಕ್ಕೂ ಇರುವ ಮಣ್ಣಿನ ಕಣಕಣದಲ್ಲೂ, ರೈತರ ಬೆವರ ಹನಿ ಶ್ರಮದಲ್ಲಿ ದೇವೇಗೌಡರ ಹೆಸರು ಅಭಿಮಾನದಿಂದ ರಾರಾಜಿಸುತ್ತಿದೆ. ದೇವೇಗೌಡರು ಈ ನೆಲದ ಸಾರ್ವಭೌಮ ರಾಜಕಾರಣಿ ಮತ್ತು ಅಜಾತ ಶತ್ರು ಆಗಿದ್ದಾರೆ . ಇದನ್ನು ಮನಗಂಡು ದಿಗ್ಗಜ ನಾಯಕರ ಹೆಸರಿಗೆ ಗೌರವಿಸುವ ದೃಷ್ಟಿಯಿಂದ ಈ ದಶಪಥ ರಸ್ತೆಗೆ ಅವರ ಹೆಸರಿಡುವುದು ಸೂಕ್ತ ಎಂದು ಶರವಣ  ವಿನಂತಿಸಿದ್ದಾರೆ. ಇದರಿಂದ ಮಾಜಿ ಪ್ರಧಾನಿಯಾಗಿರುವ ದೇವೆಗೌಡರಿಗೆ ಗೌರವ ನೀಡದಂತಾಗಲಿದೆ ಎಂದಿದ್ದಾರೆ.

ಕನ್ನಡ ನಾಡಿನ ನೆಲ ಜಲಕ್ಕೆ, ಇಲ್ಲಿಯ ಹಕ್ಕುಗಳಿಗೆ, ನಾಡಿನ ಅಸ್ಮಿತೆಗೆ ದೇವೇಗೌಡರ ಕೊಡುಗೆ  ಅಭೂತಪೂರ್ವ.  ನಾಡಿನ ಜೀವ ನದಿಗಳಾದ ಕಾವೇರಿ ಹೋರಾಟದಿಂದ ಹಿಡಿದು, ಕೃಷ್ಣೆಯ ವರೆಗೂ ಅವರ ಜನಪರ ಆಂದೋಲನ ಕರ್ನಾಟಕದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಪ್ರಧಾನಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಪ್ರಥಮ ಕನ್ನಡಿಗ ಎನ್ನುವ ಹಿರಿಮೆ ದೇವೇಗೌಡರದ್ದು. ಕರ್ನಾಟಕದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಕೊಂಡೊಯ್ದ ಹೆಮ್ಮೆ. ದಶ ಪಥ ರಸ್ತೆಗೆ ಅವರ ಹೆಸರಿಟ್ಟರೆ ಕೇಂದ್ರಕ್ಕೂ ಹೆಸರು ಬರುತ್ತದೆ ಎಂದು ಹೇಳಿದ್ದಾರೆ.

ರಾಜ್ಯದ ಬಿಜೆಪಿ ಸರಕಾರ ಪಕ್ಷ ರಾಜಕಾರಣವನ್ನು ಬದಿಗಿಟ್ಟು, ಬೆಂಗಳೂರು ಮೈಸೂರು ದಶಪಥ ರಸ್ತೆಗೆ ದೇವೇಗೌಡರ ಹೆಸರು ಇಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅವರಿಗೆ ಶರವಣ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com