ಮುಂದಿನ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ: ಡಾ ಮಹೇಶ್ ಜೋಶಿ
ಮುಂದಿನ ವರ್ಷದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ಏರ್ಪಡಲಿದೆ. ಇಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ದಿನ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
Published: 08th January 2023 11:31 AM | Last Updated: 08th January 2023 12:18 PM | A+A A-

ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡುಬಂದ ದೃಶ್ಯ
ಹಾವೇರಿ: ಮುಂದಿನ ವರ್ಷದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ಏರ್ಪಡಲಿದೆ. ಇಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ದಿನ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ನಂತರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಮಹೇಶ್ ಜೋಶಿ ಈ ವಿಷಯ ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಜೊತೆ ಇಂದು ನಡೆದ ಸಭೆಯಲ್ಲಿ ಮಂಡ್ಯದಲ್ಲಿ ಹೆಚ್ಚಿನ ಸದಸ್ಯರು ಸಮ್ಮೇಳನ ನಡೆಸಲು ಒಲವು ತೋರಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಹಾವೇರಿಯಲ್ಲಿ ಕಸಾಪ ಅಧ್ಯಕ್ಷರ ನೇತೃತ್ವದಲ್ಲಿ ಇಂದು ಕಾರ್ಯಕಾರಿಣಿ ಸಮಿತಿ ಸಭೆ ನಡೆದಿದ್ದು, 9 ಜಿಲ್ಲೆಯವರು ತಮ್ಮ ಜಿಲ್ಲೆಯಲ್ಲಿ ಸಮ್ಮೇಳನ ನಡೆಸುವಂತೆ ಮನವಿ ಮಾಡಿದರು. ಈ ಮನವಿಗೆ ಹೆಚ್ಚಿನ ಜನರು ಬೆಂಬಲ ಸೂಚಿಸಿದ ಹಿನ್ನಲೆ ಮಂಡ್ಯ ಜಿಲ್ಲೆಯಲ್ಲಿ 87ನೇ ಕನ್ನಡ ಸಾಹಿತ್ಯ ಸಮ್ಮೇಳನ (87th Kannada Sahitya Sammelana) ನಡೆಸಲು ನಿರ್ಧರಿಸಲಾಯಿತು. ಮತ ಚಲಾವಣೆಯಲ್ಲಿ ಮಂಡ್ಯಕ್ಕೆ 17 ಮತಗಳು ಬಂದಿದ್ದು, ಬಳ್ಳಾರಿಗೆ 16 ಮತಗಳು ಬಂದು ಕೂದಲೆಳೆ ಅಂತರದಲ್ಲಿ ಅವಕಾಶ ತಪ್ಪಿಹೋಯಿತು.
ಕಸಾಪ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ, 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿದೆ. ದೊಡ್ಡ ಕಾರ್ಯಕ್ರಮ ಮಾಡುವಾಗ ಸಣ್ಣ ಪುಟ್ಟ ಸಮಸ್ಯೆ ಆಗುವುದು ಸಹಜ. ಈ ಬಾರಿ ಆದ ಸಮಸ್ಯೆ ಮುಂದೆ ಪುನರಾರ್ತನೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು.
87ನೇ ಸಮ್ಮೇಳನ ಮಾಡಬೇಕು ಎಂಬುವುದರ ಬಗ್ಗೆ ಚರ್ಚೆ ಆಗಿದೆ. ಒಟ್ಟು ಒಂಬತ್ತು ಜಿಲ್ಲೆಯವರು ನಮ್ಮ ಜಿಲ್ಲೆಯಲ್ಲಿ ಸಮ್ಮೇಳನ ಮಾಡುವಂತೆ ಮನವಿ ಮಾಡಿದ್ದರು. ಮಂಡ್ಯ ಜಿಲ್ಲೆಯಲ್ಲಿ ಮಾಡಬೇಕೇಂದು ಕಾರ್ಯಕಾರಿಣಿ ಸಭೆಯಲ್ಲಿ ಅತಿ ಹೆಚ್ಚು ಜನರ ಬೆಂಬಲ ನೀಡಿದ್ದಾರೆ. 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ಮಾಡಲು ತಿರ್ಮಾನಿಸಲಾಗಿದೆ ಎಂದರು.