ಮೆಟ್ರೋ ಪಿಲ್ಲರ್ ಟ್ರ್ಯಾಜಿಡಿ: ಅವಳಿ ಮಕ್ಕಳಿಗಾಗಿ ವರ್ಕ್ ಫ್ರಮ್ ಹೋಮ್ ನಿರಾಕರಿಸಿದ್ದ ತೇಜಸ್ವಿನಿ!
ಮೆಟ್ರೋ ಪಿಲ್ಲರ್ ಬಿದ್ದು ಸಾವನ್ನಪ್ಪಿದ ತೇಜಸ್ವಿನಿ ಎಂಎಫ್ ಎ ಆರ್ ಬಿಲ್ಡಿಂಗ್ ನಲ್ಲಿರುವ ಮೋಟೋರೋಲಾ ಸಲ್ಯೂಷನ್ ನಲ್ಲಿ ಕೆಲಸ ಮಾಡುತ್ತಿದ್ದರು.
Published: 11th January 2023 10:03 AM | Last Updated: 11th January 2023 08:09 PM | A+A A-

ಮೃತ ತೇಜಸ್ವಿನಿ ಕುಟುಂಬ
ಬೆಂಗಳೂರು: ಮೆಟ್ರೋ ಪಿಲ್ಲರ್ ಬಿದ್ದು ಸಾವನ್ನಪ್ಪಿದ ತೇಜಸ್ವಿನಿ ಎಂಎಫ್ ಎ ಆರ್ ಬಿಲ್ಡಿಂಗ್ ನಲ್ಲಿರುವ ಮೋಟೋರೋಲಾ ಸಲ್ಯೂಷನ್ ನಲ್ಲಿ ಕೆಲಸ ಮಾಡುತ್ತಿದ್ದರು.
ಸಾಫ್ಟ್‌ವೇರ್ ಇಂಜಿನಿಯರ್ ತೇಜಸ್ವಿನಿ ಸುಲಾಖೆ (28) ಅವರಿಗೆ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡಿದ್ದರೂ ಸಹ ಅರ್ಧ ದಿನ ಕಚೇರಿಯಿಂದ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದರು. ತಮ್ಮ ಅವಳಿ ಮಕ್ಕಳಾದ ವಿಹಾನ್ ಮತ್ತು ವಿಸ್ಮಿತಾ ಜನವರಿ 2ನೇ ತಾರೀಖಿನಿಂದ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಪ್ರಿ ಸ್ಕೂಲ್ ಗೆ ಹೋಗಲು ಆರಂಭಿಸಿದ್ದರು.
ತೇಜಸ್ವಿನಿ ಪತಿ 33 ವರ್ಷದ ಲೋಹಿತ್ ಕುಮಾರ್ ವಿ ಸುಲಾಖೆ ವಿಜಯನಗರದಲ್ಲಿ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ತಾವು ಕೆಲಸಕ್ಕೆ ಹೋಗುವ ಮುನ್ನ ಮಕ್ಕಳನ್ನು ಮಾನ್ಯತಾ ಪಾರ್ಕ್ ನ ಪ್ರಿ ಸ್ಕೂಲ್ ಗೆ ಡ್ರಾಪ್ ಮಾಡಿ ಹೋಗುತ್ತಿದ್ದರು.
ಶಾಲೆ ಮುಗಿದ ನಂತರ ತೇಜಸ್ವಿನಿ ತನ್ನ ಮಕ್ಕಳನ್ನು ಕರೆದುಕೊಂಡು ಆಟೋರಿಕ್ಷಾದಲ್ಲಿ ಮನೆಗೆ ಮರಳುತ್ತಿದ್ದರು. ಹೊಸದಾಗಿ ಶಾಲೆಗೆ ಹೋಗುತ್ತಿದ್ದ ಮಕ್ಕಳು ಹೊಸ ಪರಿಸರಕ್ಕೆ ಹೊಂದಿಕೊಂಡು ಹೋಗಲು ಸಹಾಯ ಮಾಡುವ ಉದ್ದೇಶದಿಂದ ಅರ್ಧದಿನ ಕಚೇರಿಯಲ್ಲಿ ಕೆಲಸ ಮಾಡಿ ಉಳಿದ ಅರ್ಧ ದಿನ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ತೇಜಸ್ವಿನಿ ಅವರಿಗೆ ಇಡೀ ದಿನ ವರ್ಕ್ ಫ್ರಮ್ ಹೋಮ್ ಗೆ ಅವಕಾಶವಿತ್ತು, ಆದರೆ ಮಕ್ಕಳನ್ನು ಶಾಲೆಯಿಂದ ಕರೆತರುವ ಸಲುವಾಗಿ ಅರ್ಧ ದಿನ ಕಚೇರಿಗೆ ತೆರಳಿ ಕೆಲಸ ಮಾಡುತ್ತಿದ್ದರು.
ಅವಳಿ ಮಕ್ಕಳು ಮಾನ್ಯತಾ ಟೆಕ್ ಪಾರ್ಕ್‌ನಲ್ಲಿರುವ ವಿವೆರೊ ಇಂಟರ್‌ನ್ಯಾಶನಲ್ ಪ್ರಿಸ್ಕೂಲ್ ಮತ್ತು ಚೈಲ್ಡ್ ಕೇರ್‌ನ ವಿದ್ಯಾರ್ಥಿಗಳಾಗಿದ್ದರು" ಎಂದು ತೇಜಸ್ವಿನಿ ಸಹೋದರಿ ಸುಷ್ಮಾ ಹೇಳಿದ್ದಾರೆ.
ತೇಜಸ್ವಿನಿ ಅತ್ತೆಗೆ ಅವಳು ಕೆಲಸ ಮಾಡುವುದು ಇಷ್ಟವಿರಲಿಲ್ಲ, ಆದರೆ ತೇಜಸ್ವಿನಿ ಕೆಲಸಕ್ಕೆ ಆದ್ಯತೆ ನೀಡಿದ್ದಳು. ತನ್ನ ಮಕ್ಕಳು ಇತರ ಮಕ್ಕಳೊಂದಿಗೆ ಹೊಂದಿಕೊಳ್ಳಲು ಶಾಲೆಗಳಿಗೆ ಹೋಗಬೇಕೆಂದು ಅವಳು ಬಯಸಿದ್ದಳು.
ಆಕೆಯ ಅತ್ತೆ ಮತ್ತು ಮಾವ ಗದಗದಿಂದ ಕೆಲ ದಿನಗಳ ಹಿಂದೆ ಬಂದಿದ್ದು ಮೊಮ್ಮಕ್ಕಳೊಂದಿಗೆ ಇರುತ್ತಿದ್ದರು.
ಮಂಗಳವಾರ ಬೆಳಗ್ಗೆ ಎಂದಿನಂತೆ ನಾಲ್ವರು ಕಲ್ಕೆರೆಯ ಹೊರಮಾವು ಡಿಎಸ್ ಮ್ಯಾಕ್ಸ್ ಅಪಾರ್ಟ್‌ಮೆಂಟ್‌ನಿಂದ ಮಾನ್ಯತಾ ಟೆಕ್ ಪಾರ್ಕ್‌ಗೆ ನಾಗವಾರ ಹೊರವರ್ತುಲ ರಸ್ತೆಯಲ್ಲಿ ಸಾಗುತ್ತಿದ್ದಾಗ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಕುಸಿದು ತೇಜಸ್ವಿನಿ ಮತ್ತು ವಿಹಾನ್ ಸಾವನ್ನಪ್ಪಿದ್ದಾರೆ.