ಗಣಿಧಣಿಗೆ ಬಿಗ್ ಶಾಕ್; ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಅನುಮತಿ
ಬೆಂಗಳೂರು: ಇತ್ತೀಚಿಗಷ್ಟೇ ಹೊಸ ರಾಜಕೀಯ ಪಕ್ಷ ಘೋಷಿಸಿ ಆಡಳಿತರೂಢ ಬಿಜೆಪಿಗೆ ಸೆಡ್ಡು ಹೊಡೆದಿದ್ದ ಗಣಿಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಆಸ್ತಿ ಜಪ್ತಿ ಮಾಡಲು ಅನುಮತಿ ನೀಡಿದೆ.
ಕಳೆದ ಮಂಗಳವಾರ ಜನಾರ್ದನ ರೆಡ್ಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡದ ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಇದರಿಂದ ಎಚ್ಚೆತ್ತುಕೊಂಡ ಗೃಹ ಇಲಾಖೆ, ಸಿಬಿಐಗೆ ಅನುಮತಿ ನೀಡಿ ಆದೇಶ ನೀಡಿದೆ.
ಈ ಕುರಿತು ಇಂದು ಹೈಕೋರ್ಟ್ ಗೆ ಮಾಹಿತಿ ನೀಡಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು, ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಈಗಾಗಲೇ ಆದೇಶ ನೀಡಿದೆ. ಗೃಹ ಇಲಾಖೆಯಿಂದ ಸಿಬಿಐಗೆ ಅನುಮತಿ ನೀಡಿ ಆದೇಶಿಸಲಾಗಿದೆ ಎಂದು ತಿಳಿಸಿದರು.
ಬಳಿಕ ಹೈಕೋರ್ಟ್, ತಕ್ಷಣವೇ ಸಿಬಿಐ ತನ್ನ ಪ್ರಕ್ರಿಯೆ ಮುಂದುವರಿಸಬೇಕು. ರೆಡ್ಡಿ ಅವರ ಆಪ್ತಿ ಜಪ್ತಿಗೆ ಕ್ರಮ ತೆಗೆದುಕೊಳ್ಳಿ ಎಂದು ಸಿಬಿಐಗೆ ಆದೇಶಿಸಿದೆ.
ಹೊಸದಾಗಿ ಪತ್ತೆಯಾದ ರೆಡ್ಡಿಯ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ಕಾರಣ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಗೊಳಿಸಿದೆ.
2022ರ ಆಗಸ್ಟ್ 30 ರಂದು ಹೊಸದಾಗಿ ಪತ್ತೆಯಾದ ಜನಾರ್ದನ ರೆಡ್ಡಿ ಅವರ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲು ಸಿಬಿಐ ರಾಜ್ಯ ಸರ್ಕಾರದ ಒಪ್ಪಿಗೆ ಕೋರಿತ್ತು. ಆದರೆ ರಾಜ್ಯ ಸರ್ಕಾರ ಇದುವರೆಗೂ ಒಪ್ಪಿಗೆ ನೀಡಿರಲಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ