ಬೆಂಗಳೂರು-ಪ್ಯಾರಿಸ್ ವಿಮಾನ ವಿಯೆನ್ನಾದಲ್ಲಿ ತುರ್ತು ಭೂಸ್ಪರ್ಶ, 10 ಗಂಟೆಗಳ ಕಾಲ ಪ್ರಯಾಣಿಕರ ಪರದಾಟ

ಬೆಂಗಳೂರಿನಿಂದ ಭಾನುವಾರ ಬೆಳಗ್ಗೆ ಪ್ಯಾರಿಸ್‌ಗೆ 100 ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಫ್ರಾನ್ಸ್ ವಿಮಾನ ಆಸ್ಟ್ರಿಯಾದ ವಿಯೆನ್ನಾದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.  ಪ್ರಯಾಣಿಕರು ಸುಮಾರು ಹತ್ತು ಗಂಟೆಗಳ ಕಾಲ ವಿಯೆನ್ನಾ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರಿನಿಂದ ಭಾನುವಾರ ಬೆಳಗ್ಗೆ ಪ್ಯಾರಿಸ್‌ಗೆ 100 ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಫ್ರಾನ್ಸ್ ವಿಮಾನ ಆಸ್ಟ್ರಿಯಾದ ವಿಯೆನ್ನಾದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.  ಪ್ರಯಾಣಿಕರು ಸುಮಾರು ಹತ್ತು ಗಂಟೆಗಳ ಕಾಲ ವಿಯೆನ್ನಾ ವಿಮಾನ ನಿಲ್ದಾಣದಲ್ಲಿ ಆಹಾರ, ನೀರು ಅಥವಾ ಏರ್ ಫ್ರಾನ್ಸ್‌ನಿಂದ ಇತರೆ ಯಾವುದೇ ಮಾಹಿತಿಯಿಲ್ಲದೆ ಪರದಾಡಿದ್ದಾರೆ. ತಮ್ಮನ್ನು ಒಂದು ಗಂಟೆಯ ಅವಧಿಯಲ್ಲಿ ಪ್ಯಾರಿಸ್‌ಗೆ ಕಳುಹಿಸಬಹುದಾಗಿತ್ತು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

AF 203 ವಿಮಾನದಲ್ಲಿದ್ದ ಹೆಚ್ಚಿನ ಪ್ರಯಾಣಿಕರು ಅಮೆರಿಕ ಅಥವಾ ಕೆನಡಾಕ್ಕೆ ಹೋಗುತ್ತಿದ್ದರು ಮತ್ತು ಪ್ಯಾರಿಸ್ ಮೂಲಕ ಪ್ರಯಾಣಿಸುತ್ತಿದ್ದರು.

ಈ ಪ್ರಯಾಣಿಕರಿಗೆ ಆರಂಭದಿಂದಲೂ ಹಲವು ವಿಘ್ನಗಳು ಎದುರಾಗಿವೆ. ಅವರು ಶನಿವಾರ ರಾತ್ರಿ 9.40 ಕ್ಕೆ ಬೆಂಗಳೂರಿನಿಂದ ಮುಂಬೈಗೆ ವಿಸ್ತಾರಾ ವಿಮಾನದಲ್ಲಿ(ಯುಕೆ-866) ಹೋಗಬೇಕಿತ್ತು ಮತ್ತು ಮುಂಬೈನಿಂದ ಪ್ಯಾರಿಸ್‌ಗೆ ಏರ್ ಫ್ರಾನ್ಸ್ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಅವರಿಗೆ ಬೆಂಗಳೂರಿನಿಂದ ಪ್ಯಾರಿಸ್(AF 203)ಗೆ ನೇರವಾಗಿ ಏರ್ ಫ್ರಾನ್ಸ್ ವಿಮಾನವನ್ನು ಹತ್ತಲು ಅವಕಾಶ ನೀಡಲಾಯಿತು ಮತ್ತು ಅವರು ಅದನ್ನು ಒಪ್ಪಿಕೊಂಡರು. ದುರದೃಷ್ಟವಶಾತ್, ಈಗ ಅವರು ಆಸ್ಟ್ರಿಯಾದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ಕೆಟ್ಟ ಸ್ಥಿತಿಯಲ್ಲಿದ್ದಾರೆ, ”ಎಂದು ಬೆಂಗಳೂರಿನ ಐಟಿ ಉತ್ಪನ್ನ ವ್ಯವಸ್ಥಾಪಕ ಹರಿ ಕೃಷ್ಣನ್ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಹರಿ ಕೃಷ್ಣನ್ ಅವರ ಸಹೋದರನ ಕುಟುಂಬ ಈ ವಿಮಾನದಲ್ಲಿ ಪ್ರಯಾಣಿಸುತ್ತಿದೆ.

ವಿಯೆನ್ನಾದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ನೆರವು ನೀಡಬೇಕು ಎಂದು ಹರಿ ಕೃಷ್ಣನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಏರ್ ಫ್ರಾನ್ಸ್ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ ಮನವಿ ಮಾಡಿದ್ದಾರೆ.

ಕೃಷ್ಣನ್ ಅವರ ಸಹೋದರ ಪ್ರಭು ಸೀಬಾ ಮತ್ತು ಅತ್ತಿಗೆ ಪ್ರೀತಿ ಕುಸ್ಟಗಿ, ಪ್ರಸ್ತುತ ವಿಯೆನ್ನಾದ ಟರ್ಮಿನಲ್‌ನಲ್ಲಿ 10 ತಿಂಗಳ ಹೆಣ್ಣು ಮಗು ಮತ್ತು 6 ವರ್ಷದ ಮಗನೊಂದಿಗೆ ಹೆಣಗಾಡುತ್ತಿದ್ದಾರೆ.

“ನಮ್ಮ ವಿಮಾನವು ಭಾನುವಾರ ಬೆಳಗಿನ ಜಾವ 2.15 ಕ್ಕೆ KIA ನಿಂದ ಹೊರಟಿತು ಮತ್ತು ಏಳು ಗಂಟೆಗಳ ಪ್ರಯಾಣದ ಬಳಿಕ ವಿಮಾನದ ಕ್ಯಾಪ್ಟನ್, ತಾಂತ್ರಿಕ ದೋಷ ಸಂಭವಿಸಿದ್ದು, ವಿಯೆನ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗುತ್ತಿದೆ ಎಂದು ಘೋಷಿಸಿದರು ಎಂದು ಡಲ್ಲಾಸ್‌ನ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಕುಸ್ಟಗಿ ಅವರು ಹೇಳಿದ್ದಾರೆ.

ವಿಯೆನ್ನಾ ವಿಮಾನ ನಿಲ್ದಾಣವನ್ನು ತಲುಪಿದ ನಂತರ, ಇಂಜಿನಿಯರ್‌ಗಳು ಸಮಸ್ಯೆಯನ್ನು ಸರಿಪಡಿಸಲು ಬಂದಾಗ ಪ್ರಯಾಣಿಕರಿಗೆ ಒಳಗೆ ಕುಳಿತುಕೊಳ್ಳುವಂತೆ ಸೂಚಿಸಲಾಯಿತು ಮತ್ತು ಅವರು ಪದೇ ಪದೇ ಪವರ್ ಆನ್ ಮತ್ತು ಆಫ್ ಮಾಡಲು ಪ್ರಯತ್ನಿಸಿದರು. "90 ನಿಮಿಷಗಳ ನಂತರ, ನಮಗೆ ವಿಮಾನದಿಂದ ಇಳಿಯುವಂತೆ ಸೂಚಿಸಲಾಯಿತು ಮತ್ತು ನಂತರ ಟರ್ಮಿನಲ್‌ಗೆ ಕರೆದೊಯ್ಯಲಾಯಿತು" ಎಂದು ಅವರು ತಿಳಿಸಿದ್ದಾರೆ.

"ಏರ್ ಫ್ರಾನ್ಸ್‌ನಲ್ಲಿ ಯಾರಿಂದಲೂ ಅಕ್ಷರಶಃ ನಮಗೆ ಯಾವುದೇ ಮಾಹಿತಿ ನೀಡಲಿಲ್ಲ. ಟರ್ಮಿನಲ್ ಒಳಗೆ 10-ಗಂಟೆಗಳ ಕಾಲ ಕಾಯಬೇಕಾಯಿತು. ನಮಗೆ ಆಹಾರ, ನೀರು ಅಥವಾ ಯಾವುದೇ ಮಾಹಿತಿಯನ್ನು ನೀಡಲಿಲ್ಲ ಎಂದು ಕುಸ್ಟಗಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com