ನಿತಿನ್ ಗಡ್ಕರಿ ಕಚೇರಿಗೆ ಬೆದರಿಕೆ ಕರೆ ಪ್ರಕರಣ: ಹಿಂಡಲಗಾ ಜೈಲಿನ ಕೈದಿ ವಿಚಾರಣೆ- ಆರಗ ಜ್ಞಾನೇಂದ್ರ

ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಚೇರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಬೆಳಗಾವಿ ಹಿಂಡಲಗಾ ಜೈಲಿನ ಕೈದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ

ಬೆಂಗಳೂರು: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಚೇರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಬೆಳಗಾವಿ ಹಿಂಡಲಗಾ ಜೈಲಿನ ಕೈದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಕೋರಮಂಗಲದ ಕೆಎಸ್‌ಆರ್‌ಪಿ ಮೈದಾನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೊಲೀಸ್‌ ಕ್ರೀಡಾಕೂಟ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಬಳಿಕ ಮಾತನಾಡಿದ ಅವರು, ಬೆಳಗಾವಿ ಹಿಂಡಲಗಾ ಜೈಲಿನಿಂದ ನಾಗಪುರದಲ್ಲಿರುವ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಕಚೇರಿಗೆ ಜ.14ರಂದು ಬೆದರಿಕೆ ಕರೆ ಹೋಗಿತ್ತು.ಆ ಪ್ರಕರಣದಲ್ಲಿ ಒಬ್ಬ ಕೈದಿಯನ್ನು ವಶಕ್ಕೆ ಪಡೆಯಲಾಗಿದೆ. ಕೈದಿಗೆ ಮೊಬೈಲ್‌ ಕೊಟ್ಟಿದ್ದು ಯಾರು? ನಂಬರ್‌ ಹೇಗೆ ಸಿಕ್ಕಿತ್ತು? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ರಾಜ್ಯದಲ್ಲೂ ಆತನ ವಿರುದ್ಧ   ಎಫ್ಐಆರ್‌ ದಾಖಲು ಮಾಡಿಕೊಂಡು ತನಿಖೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವಿಚಾರಣೆ ವೇಳೆ ತಾನು ಕರೆ ಮಾಡಿಲ್ಲ ಎಂದು ಕೈದಿ ಹೇಳುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ   ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್‌, ನಾಲ್ವರು ಜೈಲರ್‌ಗಳು, ಇಬ್ಬರು ವಾರ್ಡನ್‌ಗಳು ಸೇರಿ ಏಳು ಮಂದಿಗೆ ನೊಟೀಸ್‌ ಜಾರಿ ಮಾಡಲಾಗಿದೆ. ಏಳು ಜನ ಮೂರು ದಿನದೊಳಗೆ ಉತ್ತರಿಸದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ಬೆದರಿಕೆ ಕರೆ ಹಿನ್ನೆಲೆಯಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಸೇರಿದಂತೆ ಏಳು ಮಂದಿಗೆ ನೋಟಿಸ್ ನೀಡಲಾಗಿದೆ. ಅಲ್ಲದೆ, ಕಾರಾಗೃಹಗಳಿಗೆ ಜಾಮರ್ ಅಳವಡಿಕೆ ಸಂಬಂಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ಮೂರು ತಿಂಗಳೊಳಗೆ ರಾಜ್ಯದ ಎಲ್ಲ ಜೈಲುಗಳಲ್ಲಿ 5ಜಿ ಸಿಗ್ನಲ್‌ಗಳನ್ನು ನಿರ್ಬಂಧಿಸುವ ಜಾಮರ್‌ಗಳನ್ನು ಅಳವಡಿಸಲಾಗುವುದು. ಕಾರಾಗೃಹದಿಂದ ಒಳಬರುವ ಮತ್ತು ಹೊರಹೋಗುವ ಕರೆಗಳ ಮೇಲೆ ನಿಗಾ ಇಡಲು ಸೂಚನೆಗಳನ್ನು ನೀಡಲಾಗಿದೆ ಮತ್ತು ನಿಷಿದ್ಧ ವಸ್ತುಗಳ, ವಿಶೇಷವಾಗಿ ಮೊಬೈಲ್ ಫೋನ್‌ಗಳ ಕಳ್ಳಸಾಗಣೆಯನ್ನು ನಿಭಾಯಿಸಲು ನಿಯತಕಾಲಿಕವಾಗಿ ಬ್ಯಾರಕ್‌ಗಳು ಮತ್ತು ಜೈಲು ಆವರಣದಲ್ಲಿ ತಪಾಸಣೆ ನಡೆಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com