ಆರೋಗ್ಯ ಸಚಿವರ ಬೇಜವಾಬ್ದಾರಿ ನಡೆ ಹೇಸಿಗೆ ತರಿಸುತ್ತಿದೆ: ಜೆಡಿಎಸ್ ತೀವ್ರ ಆಕ್ರೋಶ

ರಾಜ್ಯದ 167 ಡಯಾಲಿಸಿಸ್ ಕೇಂದ್ರಗಳಲ್ಲಿ 145 ಕೇಂದ್ರಗಳು ವೃತ್ತಿಪರ ಮೂತ್ರರೋಗ ತಜ್ಞರಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಸುದ್ದಿ ಕುರಿತಂತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ 167 ಡಯಾಲಿಸಿಸ್ ಕೇಂದ್ರಗಳಲ್ಲಿ 145 ಕೇಂದ್ರಗಳು ವೃತ್ತಿಪರ ಮೂತ್ರರೋಗ ತಜ್ಞರಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಸುದ್ದಿ ಕುರಿತಂತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಜೆಡಿಎಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 

ಈ ಕುರಿತ ವರದಿಯೊಂದನ್ನು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಹಂಚಿಕೊಂಡಿರುವ ಜೆಡಿಎಸ್,  ಕಿಡ್ನಿ ಸಮಸ್ಯೆ ಇರುವ ಲಕ್ಷಾಂತರ ರೋಗಿಗಳ ಜೀವದ ಜತೆ ಚೆಲ್ಲಾಟ ಆಡುವುದು ಎಷ್ಟು ಸರಿ? ಎಂದು ಆರೋಗ್ಯ ಸಚಿವರನ್ನು ಪ್ರಶ್ನಿಸಿದೆ.

ಇಷ್ಟು ಸದರವಾಗಿ ಆಡಳಿತ ನಡೆಸುತ್ತೀರಲ್ಲ, ಜೀವಗಳ ಬೆಲೆಯ ಅರಿವಿದೆಯೇ? ಬಣ್ಣಬಣ್ಣದ ಪ್ರಚಾರದ ಮಾತುಗಳಿಂದ ಚಪ್ಪಾಳೆ ಗಿಟ್ಟಿಸಬಹುದು. ಆದರೆ, ಅದರಿಂದ ಜನಸೇವೆಯಾಗುವುದಿಲ್ಲ. ಇಲಾಖೆಯ ಆಗು-ಹೋಗುಗಳ ಬಗ್ಗೆ ಪರಿಜ್ಞಾನವಿಲ್ಲದಿದ್ದರೆ, ನಿಮ್ಮಂತಹ ಆರೋಗ್ಯ ಸಚಿವ ಯಾಕೆ ಬೇಕು? ಇಷ್ಟು ಬೇಜವಾಬ್ದಾರಿ ನಡೆಯು ಹೇಸಿಗೆ ತರಿಸುತ್ತಿದೆ ಎಂದು ಕಟುವಾಗಿ ಟೀಕಿಸಿದೆ.

ರಾಜ್ಯ ಬಿಜೆಪಿ ಸರ್ಕಾರ ಲಂಗು-ಲಗಾಮಿಲ್ಲದೆ ಸಾಗುತ್ತಿರುವುದಕ್ಕೆ ಈ ಸುದ್ದಿಯೇ ಸಾಕ್ಷಿ. ರೋಗಿಗಳ ಆರೋಗ್ಯ ಸಮಸ್ಯೆಯನ್ನು ಇಷ್ಟು ಲಘುವಾಗಿ ಪರಿಗಣಿಸುವುದು ರಾಕ್ಷಸಿ ಮನಸ್ಥಿತಿ. ಈ ಸರ್ಕಾರ ಕನ್ನಡಿಗರ ರಕ್ತ ಹೀರಿ, ಹೊಟ್ಟೆ ತುಂಬಿಸಿಕೊಳ್ಳುವ ಜಿಗಣೆಗಳ ದಂಡಾಗಿದೆ. ನಿಮಗೆ ಜನತೆಯ ಶಾಪ ತಟ್ಟದೇ ಬಿಡದು ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com