ನಾನೇನು ಆಶ್ವಾಸನೆ ಕೊಡುವ ಸಿಎಂ ಅಲ್ಲ, ಕೊಡಿ ಇಲ್ಲಿ:  ಸಿಡಿಮಿಡಿಗೊಂಡು ಸ್ವಾಮೀಜಿ ಕೈಯಿಂದ ಮೈಕ್ ಕಸಿದ ಬಸವರಾಜ ಬೊಮ್ಮಾಯಿ!

ಭರವಸೆಯನ್ನಷ್ಟೆ ಕೊಟ್ಟರೆ ಒಪ್ಪುವುದಿಲ್ಲ’ ಎಂದು ಕಾಗಿನೆಲೆ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳುತ್ತಿದ್ದಂತೆ, ಅವರ ಕೈಯಿಂದ ಮೈಕ್ ಕಸಿದುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ ಪ್ರಸಂಗ ಗುರುವಾರ ನಡೆಯಿತು.
ಸ್ವಾಮೀಜಿಯಿಂದ ಮೈಕ್ ಕಸಿದ ಸಿಎಂ
ಸ್ವಾಮೀಜಿಯಿಂದ ಮೈಕ್ ಕಸಿದ ಸಿಎಂ

ಬೆಂಗಳೂರು: ‘ಭರವಸೆಯನ್ನಷ್ಟೆ ಕೊಟ್ಟರೆ ಒಪ್ಪುವುದಿಲ್ಲ’ ಎಂದು ಕಾಗಿನೆಲೆ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳುತ್ತಿದ್ದಂತೆ, ಅವರ ಕೈಯಿಂದ ಮೈಕ್ ಕಸಿದುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ ಪ್ರಸಂಗ ಗುರುವಾರ ನಡೆಯಿತು.

ಗರುಡಾಚಾರ್ ಪಾಳ್ಯದಲ್ಲಿ ಇರುವ ಶ್ರೀ ಮಂಜುನಾಥ ಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಖಾರವಾಗಿ ಕಾಗಿನೆಲೆಯ ಈಶ್ವರಾನಂದಪುರಿ ಸ್ವಾಮೀಜಿ ಅವರು ಮಾತನಾಡಿದರು.

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ, ನೀವು ಬೆಂಗಳೂರಿನ ಪ್ರವಾಹಕ್ಕೆ ಕೇವಲ ಆಶ್ವಾಸನೆ ಕೊಡುವ ಮುಖ್ಯಮಂತ್ರಿ ಆಗಬಾರದು ಎಂದು ಹೇಳಿದರು. ಆಗ ಅಸಮಾಧಾನಗೊಂಡ ಮುಖ್ಯಮಂತ್ರಿ, ‘ಕೊಡಿ ಇಲ್ಲಿ’ ಎಂದು ಮೈಕ್ ಪಡೆದುಕೊಂಡರು.

‘ಇದು ಭರವಸೆಯಲ್ಲ. ಈಗಾಗಲೇ ಯೋಜನೆ ಸಿದ್ಧಪಡಿಸಿ ಹಣ ಕೊಟ್ಟಿದ್ದೇನೆ. ಕಾಮಗಾರಿಯೂ ನಡೆಯುತ್ತಿದೆ ಬುದ್ಧಿ. ಭರವಸೆ ನೀಡುವ ಮುಖ್ಯಮಂತ್ರಿ ನಾನಲ್ಲ. ಸಾಧ್ಯವಿದ್ದರೆ ಮಾಡುತ್ತೇನೆ ಎನ್ನುತ್ತೇನೆ, ಇಲ್ಲದಿದ್ದರೆ ಇಲ್ಲ. ನನಗೆ ಯಾರ ಭಯವೂ ಇಲ್ಲ. ನಾನು ಆ ರೀತಿಯ ಮುಖ್ಯಮಂತ್ರಿಯೂ ಅಲ್ಲ. ನನಗೆ ಆ ಪದ ಬಳಸಬೇಡಿ’ ಎಂದು ಮುಖ ಗಂಟಿಕ್ಕಿದರು.

ಮತ್ತೆ ಮೈಕ್ ಪಡೆದ ಸ್ವಾಮೀಜಿ, ‘ನಾನು ಹಾಗೆ ಹೇಳಲಿಲ್ಲ. ಪೂರ್ತಿ ಹೇಳುವಷ್ಟರಲ್ಲಿ ನೀವು ಮೈಕ್ ಪಡೆದುಕೊಂಡಿರಿ. ಮುಖ್ಯಮಂತ್ರಿಯವರ ಕಾರ್ಯವೈಖರಿಯನ್ನು ನಾನು ಗಮನಿಸಿದ್ದೇನೆ. ಹಿಂದುಳಿದ ವರ್ಗಗಳ ಮಠಗಳಿಗೆ ನೂರಾರು ಕೋಟಿ ಹಣ ಕೊಟ್ಟು ಶಾಲಾ–ಕಾಲೇಜುಗಳನ್ನು ಕಟ್ಟಲು ಸಹಕಾರ ನೀಡಿದ್ದೀರಿ. ನಿಮ್ಮನ್ನು ಆ ಗುಂಪಿಗೆ ನಾವು ಸೇರಿಸುವುದಿಲ್ಲ’ ಎಂದರು. ಆಗ ನಗುಮುಖದಿಂದ ಬೊಮ್ಮಾಯಿ ಕೈಮುಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com