ನೆಟ್ಟಾರು ಸಾವಿನ ಸೇಡಿಗಾಗಿ ನಾವು ಫಾಜಿಲ್ ಹತ್ಯೆ ಮಾಡಿದೆವು; ಗುಜರಾತ್ ಹತ್ಯಾಕಾಂಡ ಹಿಂದುಗಳ ಪರಾಕ್ರಮದ ಸಂಕೇತ: ವಿಎಚ್‌ಪಿ ನಾಯಕ ಶರಣ್ ಪಂಪ್ ವೆಲ್
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.
Published: 30th January 2023 10:51 AM | Last Updated: 30th January 2023 07:57 PM | A+A A-

ಶರಣ್ ಪಂಪ್ ವೆಲ್
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆಯಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.
ಉಳ್ಳಾಲದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಮಾತನಾಡಿದ ಅವರು, ಅಗತ್ಯ ಬಿದ್ದರೆ ಭಜರಂಗದಳ ಹೋರಾಟ ಮಾಡುತ್ತದೆ, ಕೆಲವೊಮ್ಮೆ ನಾವು ನುಗ್ಗಿ ಹೊಡೆಯುತ್ತೇವೆ. ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಹಿಂದೂ ಸಮಾಜ ಕಣ್ಣೀರಲ್ಲಿ ಮುಳುಗಿತ್ತು.
ಇಡೀ ಜಿಲ್ಲೆ ಒಬ್ಬ ಉತ್ತಮ ಕಾರ್ಯಕರ್ತನ ಬಲಿದಾನಕ್ಕೆ ಬೇಸರ ಪಟ್ಟಿತ್ತು. ಆಗ ನಮ್ಮ ಕಾರ್ಯಕರ್ತರು ಅವನ ಬಲಿದಾನ ನೋಡಿ ಸುಮ್ಮನೆ ಕೂರಲಿಲ್ಲ. ಸುರತ್ಕಲ್ಗೆ ಹೋಗಿ ನುಗ್ಗಿ ನುಗ್ಗಿ ಹೊಡೆದರು. ಅದು ನಮ್ಮ ಶೌರ್ಯ. ಸುರತ್ಕಲ್ನಲ್ಲಿ ಹೊಡೆದ ವಿಡಿಯೋವನ್ನು ನೀವು ಎಲ್ಲರು ನೋಡಲೇಬೇಕು ಎಂದಿದ್ದಾರೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಸಾವಿನ ಸೇಡಿಗಾಗಿ ಫಾಜಿಲ್ ಹತ್ಯೆ; ಶರಣ್ ಪಂಪ್‌ವೆಲ್ ವಿರುದ್ಧ ದೂರು ದಾಖಲಿಸಿದ ಹತ್ಯೆಗೀಡಾದ ಫಾಜಿಲ್ ತಂದೆ
ಗುಜರಾತ್ನಲ್ಲಿ ನಡೆದಿದ್ದು ನರಮೇಧ ಅಲ್ಲ, ಅಲ್ಲಿ ನಡೆದಿದ್ದು ಹಿಂದುಗಳ ಶೌರ್ಯ, ಅದು ನಮ್ಮ ಪರಾಕ್ರಮ ಎಂದು ಹೇಳಿದ ಶರಣ್ ಪಂಪ್‌ವೆಲ್, ಪ್ರವೀಣ್ ನೆಟ್ಟಾರು ಮಾತ್ರವಲ್ಲ ಇನ್ನೂ ಕೆಲವು ಹಿಂದೂ ಕಾರ್ಯಕರ್ತರ ಹೆಸರು ಪಿಎಫ್ಐ ಟಾರ್ಗೆಟ್ ಲಿಸ್ಟ್ನಲ್ಲಿತ್ತು ಎಂದು ಎನ್ಐಎ ಹೇಳಿದೆ. ಆ ಸಂಘಟನೆ ಬ್ಯಾನ್ ಆಗಿದ್ದರೂ ಕಾರ್ಯಕರ್ತರೂ ಇನ್ನೂ ಜೀವಂತ ಇದ್ದಾರೆ. ಉಳ್ಳಾಲದಲ್ಲಿ ಹಿಂದೂ ಶಾಸಕ ಆಯ್ಕೆಯಾಗಬೇಕು ಎನ್ನುವ ಸಂಕಲ್ಪ ನಮ್ಮದು. ಅದಕ್ಕಾಗಿ ನಾವು ಉಳ್ಳಾಲದಲ್ಲಿ ಹಿಂದೂ ಶಾಸಕನ ಆಯ್ಕೆಗಾಗಿ ಅಭಿಯಾನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.