ರಾಮಲಿಂಗಾ ರೆಡ್ಡಿ ಸಭೆ ಸಕ್ಸಸ್: ಖಾಸಗಿ ಸಾರಿಗೆ ಒಕ್ಕೂಟ ನೀಡಿದ್ದ ಜುಲೈ 27ರ ಬಂದ್ ಕರೆ ವಾಪಸ್; ಬೇಡಿಕೆ ಈಡೇರಿಕೆಗೆ ಆ.10ರ ಗಡುವು!

ಶಕ್ತಿ ಯೋಜನೆಯಡಿಯಲ್ಲಿ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಮತ್ತು ಆಟೋ ಚಾಲಕರು ಸಂಕಷ್ಟಕ್ಕೀಡಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶಕ್ತಿ ಯೋಜನೆಯಡಿಯಲ್ಲಿ ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಮತ್ತು ಆಟೋ ಚಾಲಕರು ಸಂಕಷ್ಟಕ್ಕೀಡಾಗಿದ್ದು ಹೀಗಾಗಿ, ಕರ್ನಾಟಕ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಜುಲೈ 27ರಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ ಒಕ್ಕೂಟದ ಜೊತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನಡೆಸಿದ ಸಭೆ ಯಶಸ್ವಿಯಾಗಿದೆ. 

ಇಂದು ಸಾರಿಗೆ ಇಲಾಖೆ ಕಚೇರಿಯಲ್ಲಿ ಒಕ್ಕೂಟದ ಪ್ರತಿನಿಧಿಗಳೊಂದಿಗೆ ರಾಮಲಿಂಗಾರೆಡ್ಡಿ ಅವರು ಸಭೆ ನಡೆಸಿದ್ದರು. ನಂತರ ಮಾತನಾಡಿದ ಒಕ್ಕೂಟದ ಮುಖಂಡ ನಟರಾಜ ಶರ್ಮಾ ಅವರು, ಸದ್ಯ ಜುಲೈ 27ರಂದು ಖಾಸಗಿ ಸಾರಿಗೆ ಒಕ್ಕೂಟ ಕರೆ ನೀಡಿದ್ದ ಬೆಂಗಳೂರು ಬಂದ್ ಅನ್ನು ವಾಪಸ್ ಪಡೆದಿದೆ. ನಮ್ಮ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಆಗಸ್ಟ್ 10ರವರೆಗೆ ಕಾಲಾವಕಾಶ ನೀಡಲಾಗಿದೆ. ಬೇಡಿಕೆ ಈಡೇರಿಸಿದ್ದರೆ ಮುಂದಿನ ನಡೆ ನಿರ್ಧರಿಸುತ್ತೇವೆ ಎಂದರು.

ಸಭೆ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಆಟೋ ಚಾಲಕರ ಸಮಸ್ಯೆ ಬೇರೆ ಇದೆ. ಟ್ಯಾಕ್ಸಿ ಸಮಸ್ಯೆ ಬೇರೆ ಇದೆ. ಇನ್ನು ಶಕ್ತಿ ಯೋಜನೆ ಕುರಿತು ನಾನೊಬ್ಬನೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಬೇಕು ಎಂದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಶಕ್ತಿ ಯೋಜನೆಯನ್ನು ಜಾರಿಗೊಳಿಸಿದಾಗಿನಿಂದ ತಮ್ಮ ಆದಾಯಕ್ಕೆ ತೀವ್ರ ಹೊಡೆತ ಬಿದ್ದಿದೆ ಎಂದು ಖಾಸಗಿ ಬಸ್ ಮಾಲೀಕರು, ಆಟೋ ಚಾಲಕರ ಒಕ್ಕೂಟ ಆರೋಪಿಸಿದೆ.

ಫೆಡರೇಶನ್‌ನ ಪ್ರಮುಖ ಬೇಡಿಕೆಗಳಲ್ಲಿ ಒಂದಾದ, ಖಾಸಗಿ ಬಸ್‌ಗಳ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯವನ್ನು ಸರ್ಕಾರ ಪಾವತಿಸಬೇಕು. ರಾಜ್ಯ ಸರ್ಕಾರವು ಕೆಎಸ್ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಬಿಎಂಟಿಸಿ ನಿಗಮಗಳಿಗೆ 'ಶೂನ್ಯ ಟಿಕೆಟ್' ಆಧಾರದ ಮೇಲೆ ಹೇಗೆ ಮರುಪಾವತಿ ಮಾಡುತ್ತಿದೆಯೋ ಅದೇ ರೀತಿ ನಮಗೂ ಪಾವತಿ ಮಾಡಬೇಕು. ಒಂದು ವೇಳೆ ಸರ್ಕಾರಕ್ಕೆ ಇದನ್ನು ಪಾವತಿಸಲು ಸಾಧ್ಯವಾಗದಿದ್ದರೆ, ರಸ್ತೆ ತೆರಿಗೆ ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಖಾಸಗಿ ಬಸ್ ನಿರ್ವಾಹಕರು ಒತ್ತಾಯಿಸಿದ್ದಾರೆ.

ಶಕ್ತಿ ಯೋಜನೆಯಿಂದಾಗಿ ಸಂಕಷ್ಟಕ್ಕೆ ತುತ್ತಾಗಿರುವ ಆಟೋ ಚಾಲಕರಿಗೆ ಮಾಸಿಕ 10,000 ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿಗಳ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂಬುದು ಆಟೋ ಒಕ್ಕೂಟಗಳ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ. ಇದಲ್ಲದೆ, ವಾಣಿಜ್ಯ ಸರಕು ವಾಹನಗಳು ಮತ್ತು ಕ್ಯಾಬ್‌ಗಳ ಮೇಲಿನ ಜೀವಮಾನದ ತೆರಿಗೆ ಹೆಚ್ಚಳದ ವಿರುದ್ಧ ಫೆಡರೇಶನ್‌ನ ಸದಸ್ಯರು ಪ್ರತಿಭಟನೆ ನಡೆಸುವ ನಿರೀಕ್ಷೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com