ಕನಕಪುರ ರಸ್ತೆಯಲ್ಲಿ 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆ: ಎಸೆದವರು ಯಾರು? ಅಸಲಿಯತ್ತೇನು?
ದೇಶದಲ್ಲಿ ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸಿದೆ. ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಕನಕಪುರ ರಸ್ತೆಯಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ.
Published: 26th July 2023 08:34 AM | Last Updated: 26th July 2023 03:18 PM | A+A A-

ನಕಲಿ ನೋಟು
ಬೆಂಗಳೂರು: ದೇಶದಲ್ಲಿ ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ನಿಲ್ಲಿಸಿದೆ. ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿಯ ಕನಕಪುರ ರಸ್ತೆಯಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿವೆ. ಅದು ಕೂಡ ಒಂದೋ ಎರಡೋ ಅಲ್ಲ... ಬಂಡಲ್‌ಗಟ್ಟಲೆ!.
ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿರುವ ನೈಸ್ ರಸ್ತೆಯ ಬಳಿ 2,000 ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ. ಕನಕಪುರ ರಸ್ತೆಗೆ ಹೊಂದಿಕೊಂಡಿರುವ ನೈಸ್ ರಸ್ತೆ ಬಳಿಯ ಪೊದೆಯಲ್ಲಿ ಸೂಟ್‌ಕೇಸ್ ಹಾಗೂ ಎರಡು ರಟ್ಟಿನ ಬಾಕ್ಸ್‌ಗಳು ಇದ್ದವು. ಅನುಮಾನಗೊಂಡ ಸ್ಥಳೀಯರು, ಎರಡನ್ನೂ ಬಿಚ್ಚಿ ನೋಡಿದ್ದರು. ಆಗ ಜೆರಾಕ್ಸ್ ನೋಟುಗಳು ಕಂಡಿವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಇದನ್ನೂ ಓದಿ: 2,000 ರೂ. ನೋಟು ವಿನಿಮಯ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಕಂತೆ ಕಂತೆ ನೋಟುಗಳನ್ನು ಕಂಡು ಜನ ದಂಗಾಗಿದ್ದಾರೆ. ಆರ್‌ಬಿಐ ನೋಟುಗಳ ಚಲಾವಣೆಯನ್ನು ನಿಲ್ಲಿಸಿದ ಬಳಿಕ, ಇವುಗಳನ್ನು ಮಾರುಕಟ್ಟೆಯಲ್ಲಿ ಚಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಕಿಡಿಗೇಡಿಗಳು ಎಸೆದಿದ್ದಾರೆ ಎಂದು ಶಂಕಿಸಲಾಗಿದೆ
‘ಸ್ಥಳೀಯರು ನೀಡಿದ್ದ ಮಾಹಿತಿ ಆಧರಿಸಿ ಸ್ಥಳಕ್ಕೆ ಹೋಗಿ ನೋಟುಗಳನ್ನು ಜಪ್ತಿ ಮಾಡಲಾಗಿದೆ. 2,000 ಮುಖಬೆಲೆಯ ಜೆರಾಕ್ಸ್ ನೋಟುಗಳು ಇವಾಗಿವೆ. ಇವುಗಳ ಒಟ್ಟು ಮೊತ್ತ 10 ಕೋಟಿ. ಅಸಲಿ ನೋಟುಗಳನ್ನು ಹೋಲುವ ರೀತಿಯಲ್ಲಿ ಬಣ್ಣದ ಜೆರಾಕ್ಸ್ ಬಳಸಿ ನಕಲಿ ನೋಟುಗಳನ್ನು ಮುದ್ರಿಸಲಾಗಿದೆ. ಅಸಲಿ ನೋಟುಗಳ ಜೊತೆ ಸೇರ್ಪಡೆ ಮಾಡಿ, ಚಲಾವಣೆ ಮಾಡುವ ಜಾಲ ಸಕ್ರಿಯವಾಗಿರುವ ಅನುಮಾನವಿದೆ’ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನಕಲಿ ನೋಟು: ಕರ್ನಾಟಕದ ವಿವಿಧ ಬ್ಯಾಂಕ್ ಮ್ಯಾನೇಜರ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ ಆರ್‌ಬಿಐ
‘2,000 ಮುಖಬೆಲೆ ನೋಟುಗಳ ಚಲಾವಣೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರದ್ದುಪಡಿಸಿದೆ. ಹಳೇ ನೋಟುಗಳನ್ನು ಬ್ಯಾಂಕ್‌ಗೆ ಪಾವತಿಸಲು ಹೇಳಿದೆ. ಇದೇ ಕಾರಣಕ್ಕೆ ಆರೋಪಿಗಳು, ಜೆರಾಕ್ಸ್ ನೋಟುಗಳನ್ನು ರಸ್ತೆ ಪಕ್ಕದಲ್ಲಿ ಎಸೆದು ಹೋಗಿದ್ದಾರೆ. ಇವುಗಳನ್ನು ಎಸೆದವರು ಯಾರು? ಅವರ ಉದ್ದೇಶವೇನು ? ಖೋಟಾ ನೋಟು ಜಾಲ ಸಕ್ರಿಯವಾಗಿದೆಯಾ? ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿವೆ.
ರೈಸ್ ಪುಲ್ಲಿಂಗ್ ವಂಚಕರು ಜನರನ್ನು ವಂಚಿಸಲು ಬಳಸುವ ಪಾತ್ರೆಯೂ ಸ್ಥಳದಲ್ಲಿ ಪತ್ತೆಯಾಗಿದ್ದು, ರೈಸ್ ಪುಲ್ಲಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿರುವವರು ಅಲ್ಲೇ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ. ತಲಘಟ್ಟಪುರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.