ದುಬಾರಿ ದುನಿಯಾ: ಆಗಸ್ಟ್ 1 ರಿಂದ ನಂದಿನಿ ಹಾಲು, ಹೊಟೇಲ್ ಊಟ-ತಿಂಡಿ, ಕಾಫಿ-ಟೀ ಬೆಲೆ ಏರಿಕೆ
ಬೆಂಗಳೂರು: ತರಕಾರಿ, ದವಸ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ನಾಳೆಯಿಂದ ಮತ್ತಷ್ಟು ದುನಿಯಾ ದುಬಾರಿ ಎನಿಸಲಿದೆ. ಹೊರಗಡೆ ಪ್ರಯಾಣಿಸುವಾಗ ಹಸಿವಾಯಿತೆಂದು ಹೊಟೇಲ್ ಒಳಗೆ ಕಾಲಿಟ್ಟರೆ ಜೇಬು ಭರ್ತಿಯಿಲ್ಲದೆ ಹೋದರೆ ಅರ್ಧ ಹೊಟ್ಟೆ ತುಂಬಿಸಿಕೊಂಡು ಬರಬೇಕಾದೀತು.
ನಾಳೆ ಆಗಸ್ಟ್ 1 ರಿಂದ ನಂದಿನಿ ಪ್ಯಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಾದರೆ, ಹೋಟೆಲ್ ತಿಂಡಿ, ತಿನಿಸು ಕೂಡ ದುಬಾರಿ ಆಗಲಿವೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಗಸ್ಟ್ 1 ರಿಂದ ಹೋಟೆಲ್ ಕಾಫಿ, ಟೀ, ತಿಂಡಿ ತಿನಿಸುಗಳ ದರ ಹೆಚ್ಚಳ ಮಾಡಲು ಹೋಟೆಲ್ ಸಂಘ ತೀರ್ಮಾನಿಸಿದೆ.ಹೊಟೇಲ್ ಮಾಲೀಕರುಗಳ ಸಂಘದ ಅಧ್ಯಕ್ಷ ಪಿ ಸಿ ರಾವ್ ಮಾಹಿತಿ ನೀಡಿರುವ ಪ್ರಕಾರ, ತಿಂಡಿ ತಿನಿಸು ಜೊತೆಗೆ ಕಾಫಿ ಟೀ ದರವನ್ನು ಶೇಕಡ 10ರಷ್ಟು ಸಹ ಹೆಚ್ಚಳ ಮಾಡಲಾಗುವುದು.
ಅನೇಕ ಹೋಟೆಲ್ ನವರು ಶೇಕಡ 20ರಷ್ಟು ಏರಿಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ನಾಳೆಯಿಂದ ಒಂದು ಲೀಟರ್ ಹಾಲು 42 ರೂಪಾಯಿ ಆಗಲಿದೆ. ಹೀಗಾಗಿ ಕಾಫಿ ಹಾಗೂ ಟೀ ಬೆಲೆಯನ್ನು 3 ರೂಪಾಯಿ ಏರಿಸಲು ಹಾಗೂ ತಿಂಡಿ ತಿನಿಸುಗಳ ದರ 5 ಹಾಗೂ ಊಟದ ದರ 10 ರೂಪಾಯಿ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ