ಬಳ್ಳಾರಿ: ಆಂಧ್ರ ಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುಗಳನ್ನು ತಯಾರಿಸಲು 'ನಂದಿನಿ' ಬ್ರಾಂಡ್ ತುಪ್ಪವನ್ನು ಸರಬರಾಜು ಮಾಡುತ್ತಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ಸೋಮವಾರ ಹೇಳಿದ್ದಾರೆ.
ಒಂದು ವರ್ಷದಿಂದಲೇ ತಿರುಪತಿಗೆ ಕೆಎಂಎಫ್ ತುಪ್ಪ ಪೂರೈಸುತ್ತಿಲ್ಲ. ನಾವು ಬೆಲೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನಂದಿನಿ ಬ್ರಾಂಡ್ ಉತ್ಪನ್ನಗಳು ಅದರ ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ ಎಂದಿದ್ದಾರೆ.
ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಅಗತ್ಯವಿರುವ ತುಪ್ಪಕ್ಕೆ ಟೆಂಡರ್ ಕರೆಯಲಾಗಿತ್ತು. ನಮ್ಮ ದರ ಹಾಗೂ ಗುಣಮಟ್ಟ ಹೆಚ್ಚಿರುವುದರಿಂದ ನಾವು ಆ ಟೆಂಡರ್ ನಲ್ಲಿ ಪಾಲ್ಗೊಳ್ಳಲಿಲ್ಲ. ಹಾಗಾಗಿ ಅವರು ಬೇರೆ ಕಂಪನಿಯ ತುಪ್ಪವನ್ನು ಖರೀದಿಸುತ್ತಿದ್ದಾರೆ ಎಂದು ಭೀಮಾ ನಾಯ್ಕ್ ಅವರು ತಿಳಿಸಿದ್ದಾರೆ.
''ಸುಮಾರು ಒಂದು ವರ್ಷದ ಹಿಂದೆಯೇ ಅವರು(ಟಿಟಿಡಿ) ಟೆಂಡರ್ ಕರೆದು ಟೆಂಡರ್‌ನಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದ್ದರು. ಆದರೆ ನಾವು ಸ್ಪರ್ಧಾತ್ಮಕ ದರದಲ್ಲಿ ತುಪ್ಪ ನೀಡಲು ಸಾಧ್ಯವಿಲ್ಲ. ಏಕೆಂದರೆ ಇ-ಪ್ರೊಕ್ಯೂರ್‌ಮೆಂಟ್ ಟೆಂಡರ್‌ನಲ್ಲಿ ಯಾರು ಕಡಿಮೆ ದರವನ್ನು ನಮೂದಿಸುತ್ತಾರೋ ಅವರಿಗೆ ಟೆಂಡರ್ ಸಿಗುತ್ತದೆ. ಆದರೆ ನಮ್ಮ ದರ ಫಿಕ್ಸ್ ಆಗಿದೆ. ಅದರಲ್ಲಿ ರಾಜಿ ಮಾಡಿಕೊಳ್ಳಲ್ಲ ಎಂದು ಭೀಮಾ ನಾಯ್ಕ್ ಹೇಳಿದ್ದಾರೆ.
ಪ್ರಸ್ತುತ ಪೂರೈಕೆದಾರರು ಕೆಎಂಎಫ್‌ಗೆ ಹೋಲಿಸಿದರೆ ಟಿಟಿಡಿಗೆ ಅತ್ಯಂತ ಕಡಿಮೆ ದರದಲ್ಲಿ ತುಪ್ಪವನ್ನು ಪೂರೈಸುತ್ತಿದೆ ಎಂಬ ಮಾಹಿತಿ ಇದೆ. “ನಮ್ಮದಕ್ಕೆ ಹೋಲಿಸಿದರೆ ಇದು ಕಡಿಮೆ ಗುಣಮಟ್ಟದ್ದಾಗಿರಬಹುದು ಎಂದು ಕೆಎಂಎಫ್ ಅಧ್ಯಕ್ಷರು ತಿಳಿಸಿದ್ದಾರೆ.
ಇನ್ನು ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ನಿಲ್ಲಿಸಿದ ಕೆಎಂಎಫ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಸಿಟಿ ರವಿ ಅವರು, ಕಾಂಗ್ರೆಸ್ ತನ್ನ ಅಜೆಂಡಾವನ್ನು ಮುಂದುವರಿಸಲು ಸುವರ್ಣ ಕರ್ನಾಟಕವನ್ನು ನಾಶಮಾಡಲು ಹವಣಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಂದಿನಿ ವಿಷಯವನ್ನು ನಾಚಿಕೆಯಿಲ್ಲದೆ ರಾಜಕೀಯ ಮಾಡಿ ಅಮೂಲ್ ಜೊತೆ ವಿಲೀನ ಮಾಡಲಾಗುತ್ತಿದೆ ಎಂದು ಆರೋಪಿಸಿತು.
ಅಧಿಕಾರಕ್ಕೆ ಬಂದ ನಂತರ, ಕಾಂಗ್ರೆಸ್ ಸರ್ಕಾರ, ಹಾಲಿನ ದರವನ್ನು ಹೆಚ್ಚಿಸಿತು, ಇದರಿಂದಾಗಿ ಟಿಟಿಡಿ ಮಂಡಳಿಗೆ ನಂದಿನಿ ತುಪ್ಪವನ್ನು ಹಿಂದಿನ ಬೆಲೆಗೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಸಿಟಿ ರವಿ ಆರೋಪಿಸಿದ್ದಾರೆ.
ಕೆಎಂಎಫ್ ಹಲವಾರು ವರ್ಷಗಳಿಂದ ಟಿಟಿಡಿಗೆ ತುಪ್ಪವನ್ನು ಪೂರೈಸುತ್ತಿತ್ತು ಮತ್ತು ಕೆಎಂಎಫ್ ತುಪ್ಪದಿಂದ ಲಡ್ಡುಗಳು ಉತ್ತಮ ರುಚಿಯನ್ನು ಹೊಂದಿವೆ ಎಂದು ಟ್ರಸ್ಟ್ ಹಲವಾರು ಬಾರಿ ಹೇಳಿತ್ತು.
ಕರ್ನಾಟಕ ಕ್ಯಾಬಿನೆಟ್ ಜುಲೈ 27 ರಂದು ಕೆಎಂಎಫ್ ತನ್ನ ನಂದಿನಿ ಹಾಲಿನ ಮಾರಾಟ ದರವನ್ನು ಲೀಟರ್‌ಗೆ ಮೂರು ರೂಪಾಯಿಗಳಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿತ್ತು. ಪರಿಸ್ಕೃತ ದರ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ.
Advertisement