ಬೆಳ್ಳಂದೂರು ಕೆರೆಯ ನೊರೆಗೆ ಕಾರಣ ಬಹಿರಂಗ: ಐಐಎಸ್ ಸಿ ಸಂಶೋಧಕರು ಹೇಳಿದ್ದೇನು?

ಬೆಳ್ಳಂದೂರು ಕೆರೆಯಲ್ಲಿ ನೊರೆ ಕಾಣಿಸಿಕೊಳ್ಳಲು ಕಾರಣವೇನೆಂದು ಐಐಎಸ್‌ಸಿಯು  ಪತ್ತೆ ಹಚ್ಚಿದೆ. ನಾಲ್ಕು ವರ್ಷಗಳ ಅಧ್ಯಯನ ಮಾಡಿದ ನಂತರ ಸಂಶೋಧಕರು ಇದರ ವಿಚಾರವಾಗಿ ಮೂರು ಕಾರಣಗಳನ್ನು ಈಗ ಹೇಳಿದ್ದಾರೆ.
ಬೆಳ್ಳಂದೂರು ಕೆರೆ ನೊರೆ( ಸಂಗ್ರಹ ಚಿತ್ರ)
ಬೆಳ್ಳಂದೂರು ಕೆರೆ ನೊರೆ( ಸಂಗ್ರಹ ಚಿತ್ರ)

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ನೊರೆ ಕಾಣಿಸಿಕೊಳ್ಳಲು ಕಾರಣವೇನೆಂದು ಐಐಎಸ್‌ಸಿಯು  ಪತ್ತೆ ಹಚ್ಚಿದೆ. ನಾಲ್ಕು ವರ್ಷಗಳ ಅಧ್ಯಯನ ಮಾಡಿದ ನಂತರ ಸಂಶೋಧಕರು ಇದರ ವಿಚಾರವಾಗಿ ಮೂರು ಕಾರಣಗಳನ್ನು ಈಗ ಹೇಳಿದ್ದಾರೆ.

ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ  2015 ರಲ್ಲಿ ಕಾಣಿಸಿಕೊಂಡ ನೊರೆ ಮತ್ತು ಬೆಂಕಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತು. ಇದು ನ್ಯಾಯಾಲಯಗಳು  ಸಮಸ್ಯೆಯನ್ನು ಗಮನಿಸುವಂತೆ ಮಾಡಿತು. ಅದಾದ ನಂತರ ಅದರ ಹಿಂದಿನ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ಐಐಎಸ್‌ಸಿ ಸಂಶೋಧನೆ ನಡೆಸಿತು.

ಒಂದು ಅತಿಯಾದ ಮಳೆ, ಎರಡನೆಯದು ಕೆರೆಗೆ ಸೇರುವ ಸಂಸ್ಕರಿಸದ ಕೊಳಚೆ ನೀರು, ಮೂರನೆ ಕಾರಣ ನಿರ್ದಿಷ್ಟ ಬ್ಯಾಕ್ಟೀರಿಯಾವನ್ನು ಹೊಂದಿರುವ ಘನವಸ್ತುಗಳು ಕಾರಣ ಎಂದು ಸಿಎಸ್‌ಟಿ (ಸೆಂಟರ್‌ ಫಾರ್‌ ಸಸ್ಟೈನಬಲ್‌ ಟೆಕ್ನಾಲಜೀಸ್‌), ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್‌ ನ ಸಂಶೋದಕರು ಹೇಳಿದ್ದಾರೆ. ಆದರೆ ತಂಡದ ಇತ್ತೀಚಿನ ವಿಶ್ಲೇಷಣೆಯ ಪ್ರಕಾರ ಮನೆಯಲ್ಲಿ ತೊಳೆಯಲು ಬಳಸುವ ಸೋಪ್​ಪೌಡರ್​ ಮತ್ತು ಶಾಂಪುಗಳಿಂದ ನೊರೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.

ನೊರೆ ಬರುವುದನ್ನು ತಡೆಯುವ ಒಂದು ಮಾರ್ಗವೆಂದರೆ, ಸಂಸ್ಕರಣೆ ಮಾಡದ ಕೊಳಚೆ ನೀರನ್ನು ಕೆರೆಗೆ ಬಿಡುವುದನ್ನು ನಿಲ್ಲಿಸುವುದು, ಜೊತೆಗೆ ಮಳೆಗಾಲದ ಮೊದಲು ಕೆರೆಗಳಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯುವುದು. ಸಂಸ್ಕರಣೆ ಮಾಡದ ಕೊಳಚೆನೀರು ಕೆರೆಗೆ ಸೇರಿ ಕೆಸರಾಗಿ ಬದಲಾಗುತ್ತಿದೆ. ಹೀಗಾಗಿ ಸಂಸ್ಕರಣೆ ಮಾಡದ ಕೊಳಚೆನೀರನ್ನು ಕೆರೆಗೆ ಬಿಡುವುದನ್ನು ನಿಲ್ಲಿಸಬೇಕು. ಕೆರೆಗೆ ಕೊಳಚೆನೀರು ಸೇರಿ 10-15 ದಿನಗಳ ನಂತರ ಹೂಳಾಗಿ ಬದಲಾಗುತ್ತದೆ  ಐಐಎಸ್ ಸಿ ತಿಳಿಸಿದೆ.

ಹೆಚ್ಚಿನ ಕೊಳಚೆನೀರು ಹರಿಯುವುದರಿಂದ ಅದರ ಒಂದು ಭಾಗವು ಕೆಸರಿಗೆ ಸಡಿಲವಾಗಿ ಅಂಟಿಕೊಳ್ಳುತ್ತದೆ. ಪರಿಣಾಮವಾಗಿ, ಅದರ ಸಾಂದ್ರತೆಯು ಹೆಚ್ಚಾಗುತ್ತದೆ. “ಕೆಲವು ಸಂದರ್ಭಗಳಲ್ಲಿ, ಮೂಲ ಸಾಂದ್ರತೆಯ 200 ಪಟ್ಟು ಹೆಚ್ಚು ಸರೋವರವನ್ನು ಪ್ರವೇಶಿಸುತ್ತದೆ” ಎಂದು ಸಿಎಸ್ ಟಿ ಯ ಮುಖ್ಯ ಸಂಶೋಧನಾ ವಿಜ್ಞಾನಿ ಮತ್ತು ಅಧ್ಯಯನದ ಲೇಖಕರಲ್ಲಿ ಒಬ್ಬರಾದ ಚಾಣಕ್ಯ ಹೆಚ್​​ ತಿಳಿಸಿದ್ದಾರೆ.

ನೊರೆಗೆ ಮತ್ತೊಂದು ಕಾರಣವೆಂದರೇ ಮಳೆಗಾಲದಲ್ಲಿ ಕೆರೆಗೆ ಒಳ ಹರಿವು ಹೆಚ್ಚುವುದರಿಂದ ನಗರದ ಹೊಲಸು ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ಸೇರುತ್ತದೆ. ಈ ಹೆಚ್ಚಿನ ಪ್ರಮಾಣದ ಒಳಹರಿವಿನ ಮೂಲಕ ಬಂದ ಸರ್ಫ್ಯಾಕ್ಟಂಟ್ ನೊರೆಗೆ ಮುಖ್ಯ ಕಾರಣವಾಗಿದೆ. ಮಳೆಯಿಂದಾಗಿ ಕೆರೆಯಲ್ಲಿ ನೀರಿನ ಮಟ್ಟವು ಹೆಚ್ಚಾದಂತೆ, ಹೆಚ್ಚಿನ ಪ್ರಮಾಣದ ಸರ್ಫ್ಯಾಕ್ಟಂಟ್‌ ಸೇರಿಕೊಂಡು ಕೆರೆಯ 25 ಅಡಿ ಆಳದವರೆಗು ತಲುಪುತ್ತದೆ ಎಂದು ಸಸ್ಟೈನಬಲ್ ಟೆಕ್ನಾಲಜೀಸ್ ಸೆಂಟರ್‌ನ ಅಸೋಸಿಯೇಟ್ ಪ್ರೊಫೆಸರ್ ಮತ್ತು ಲೇಖಕರಲ್ಲಿ ಒಬ್ಬರಾದ ಲಕ್ಷ್ಮೀನಾರಾಯಣ ರಾವ್ ಹೇಳಿದರು.

ಈ ಎರಡು ಅಂಶಗಳ ಜೊತೆಗೆ, ಕೆಲವು ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಬೇಡವಾದ ಘನವಸ್ತುಗಳು ನೊರೆಗೆ ಕಾರಣವಾಗಿರಬಹುದು ಎಂದು ಸಂಶೋಧಕರು ಸೂಚಿಸಿದ್ದಾರೆ ಎಂದು ಐಐಎಸ್ ಸಿ ಹೇಳಿದೆ.

ತಂಡವು ಕಳೆದ ನಾಲ್ಕು ವರ್ಷಗಳಲ್ಲಿ ಪ್ರತಿ ತಿಂಗಳು ಕೆರೆಯ ನೀರಿನ ಮಾದರಿಗಳನ್ನು ಅಧ್ಯಯನ ಮಾಡಿದೆ. ಇದು ಕೆರೆಯ ವಿವಿಧ ಪ್ರದೇಶಗಳಲ್ಲಿನ ಸರ್ಫ್ಯಾಕ್ಟಂಟ್‌ಗಳ ರಾಸಾಯನಿಕ ಸಂಯೋಜನೆಯಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಲು ಲ್ಯಾಬ್ ಮಾದರಿಯನ್ನು ಮರುಸೃಷ್ಟಿಸಿತು. "ನೀರು ಮತ್ತು ಫೋಮ್ ಮಾದರಿಗಳನ್ನು ಸಂಗ್ರಹಿಸಲು ಮತ್ತು ಪ್ರಯೋಗಗಳನ್ನು ನಡೆಸಲು ನಾನು ಪ್ರತಿ ತಿಂಗಳು ಕೆರೆಗೆ ಹೋಗಬೇಕಾಗಿತ್ತು ಎಂದು ಸಿಎಸ್‌ಟಿಯ ಪಿಎಚ್‌ಡಿ ವಿದ್ಯಾರ್ಥಿ ಮತ್ತು ಅಧ್ಯಯನದ ಮೊದಲ ಲೇಖಕ ರೇಶ್ಮಿ ದಾಸ್ ಹೇಳುತ್ತಾರೆ.

ಸರೋವರಕ್ಕೆ ಸಂಸ್ಕರಿಸದ ಒಳಚರಂಡಿ ಪ್ರವೇಶವನ್ನು ನಿಲ್ಲಿಸುವುದು ಸರ್ಫ್ಯಾಕ್ಟಂಟ್ಗಳು ಮತ್ತು ಕೆಸರುಗಳ ನಿರ್ಮಾಣವನ್ನು ತಡೆಯಲು ನಿರ್ಣಾಯಕವಾಗಿದೆ ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ. ಅಲ್ಲದೆ ಮಳೆಗಾಲ ಆರಂಭಕ್ಕೂ ಮುನ್ನ ಕೆರೆಯಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯಲು ಕ್ರಮಕೈಗೊಳ್ಳಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಇತ್ತೀಚಿನ ವರದಿಯ ಪ್ರಕಾರ, ಏಪ್ರಿಲ್ 2022 ಮತ್ತು ಮಾರ್ಚ್ 2023 ರ ನಡುವೆ, ಬೆಳ್ಳಂದೂರು ಕೆರೆಯನ್ನು ಐದು ಬಾರಿ 'ಡಿ' ವರ್ಗದಲ್ಲಿ ಮತ್ತು ಏಳು ಬಾರಿ 'ಇ' ವರ್ಗದಲ್ಲಿ ವರ್ಗೀಕರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com