ಕೇಸ್ ಗಳನ್ನು ಹಿಂಪಡೆದು ಒತ್ತುವರಿ ತೆರವಿಗೆ ಸಹಕರಿಸಿ: ಖಾಸಗಿ ಡೆವಲಪರ್ಸ್ ಗಳಿಗೆ ಡಿಕೆಶಿ ಮನವಿ

ರಾಜಾಕಾಲುವೆ ಒತ್ತುವರಿ ತೆರವಿಗೆ ಕೋರ್ಟ್ ನಿಂದ ಸ್ಟೇ ತಂದವರೆಲ್ಲರೂ ಕೇಸ್ ಗಳನ್ನು ಹಿಂಪಡೆದು ಒತ್ತುವರಿ ತೆರವು ಕಾರ್ಯಾಚರಣೆಗೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಾಸಗಿ ಡೆವಲಪರ್ಸ್ ಗಳಿಗೆ ಗುರುವಾರ ಮನವಿ ಮಾಡಿದ್ದಾರೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
Updated on

ಬೆಂಗಳೂರು: ರಾಜಾಕಾಲುವೆ ಒತ್ತುವರಿ ತೆರವಿಗೆ ಕೋರ್ಟ್ ನಿಂದ ಸ್ಟೇ ತಂದವರೆಲ್ಲರೂ ಕೇಸ್ ಗಳನ್ನು ಹಿಂಪಡೆದು ಒತ್ತುವರಿ ತೆರವು ಕಾರ್ಯಾಚರಣೆಗೆ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಾಸಗಿ ಡೆವಲಪರ್ಸ್ ಗಳಿಗೆ ಗುರುವಾರ ಮನವಿ ಮಾಡಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹೊಂದಿರುವ ಡಿಕೆ ಶಿವಕುಮಾರ್ ಅವರು ಇಂದು  ಮೊದಲ ಬಾರಿಗೆ ನಗರ ಪ್ರದಕ್ಷಿಣೆ ನಡೆಸಿದರು. ಈ ವೇಳೆ ರಾಜಾಕಾಲುವೆಗಳನ್ನು ತಕ್ಷಣ ತೆರವು ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ದಿವ್ಯಶ್ರೀ ಅಪಾರ್ಟ್ ಮೆಂಟೇ ಇರಲಿ, ಶಿವಕುಮಾರ್ ಅಪಾರ್ಟ್ ಮೆಂಟೇ ಇರಲಿ. ಯಾರೇ ರಾಜಾಕಾಲುವೆ ಒತ್ತುವರಿ ಮಾಡಿದರೂ ಅದನ್ನು ತೆರವುಗೊಳಿಸಬೇಕು. ಕೋರ್ಟ್ ನಿಂದ ಸ್ಟೇ ತಂದವರು ತಾವಾಗಿಯೇ ತೆರವು ಮಾಡಿದರೆ ಒಳಿತು. ಇಲ್ಲದಿದ್ದರೆ ನಾವು ಸಹ ಕಾನೂನು ಮೂಲಕವೇ ತೆರವು ಕಾರ್ಯಾಚರಣೆ ನಡೆಸುತ್ತೇವೆ ಎಂದರು.

ಜನರು ನ್ಯಾಯಾಲಯಕ್ಕೆ ಹೋಗಿ ವಿಳಂಬ ಮಾಡಿದರೆ ನಾವು ಯಾವುದೇ ನೋಟಿಸ್‌ಗಳನ್ನು ನೀಡುವುದಿಲ್ಲ. ಎಲ್ಲಾ ಖಾಸಗಿ ಜಮೀನು ಮಾಲೀಕರು ಒತ್ತುವರಿ ತೆರವುಗೊಳಿಸಲು, ಅಧಿಕಾರಿಗಳೊಂದಿಗೆ ಸಹಕರಿಸಬೇಕು ಮತ್ತು ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ನಾನು ಮನವಿ ಮಾಡುತ್ತೇನೆ. ಇಲ್ಲದಿದ್ದರೆ ಸರ್ಕಾರವು ಕಾನೂನಿನ ಮೂಲಕ ಸಂಬಂಧಿಸಿದ ಸೆಕ್ಷನ್‌ಗಳನ್ನು ಬಳಸಿ ರಾಜಕಾಲುವೆಗಳ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಎಚ್ಚರಿಸಿದ್ದಾರೆ.

ಮಳೆ ಬಂದಾಗ ಹಲವು ಪ್ರದೇಶಗಳಿಗೆ ನೀರು ನುಗ್ಗಿ ಜನ ಕಣ್ಣೀರಿಡುತ್ತಿದ್ದಾರೆ. ಇಷ್ಟಾದರೂ ರಾಜಾಕಾಲುವೆ ಒತ್ತುವರಿ ಮುಂದುವರೆದಿದೆ. ಎಲ್ಲಿಯೂ ಬುಲ್ಡೋಜರ್ ಕಾರ್ಯಾಚರಣೆ ನಿಲ್ಲಿಸಲು ನಾವು ಹೇಳಿಲ್ಲ. ಕಾರ್ಯಾಚರಣೆ ಮುಂದುವರೆಯಲಿದೆ. ಖಾಸಗಿ ಡವಲಪರ್ಸ್ ಗಳು ಕೇಸ್ ಗಳನ್ನು ಹಿಂಪಡೆದು ಒತ್ತುವರಿ ತೆರವಿಗೆ ಸಹಕರಿಸಬೇಕು. ಇಲ್ಲದಿದ್ದರೆ ನಾವು ಕಾನೂನು ಕ್ರಮದ ಮೂಲಕ ಕೆಲಸ ಮಾಡುತ್ತೇವೆ ಎಂದರು.

12 ಮೀ. ಉದ್ದದ ರಾಜಾಕಾಲುವೆ ಜಾಗದಲ್ಲಿ 7 ಮೀ.ಒತ್ತುವರಿ ಮಾಡಿಕೊಳ್ಳಲಾಗಿದೆ. ಅದು ಹೀಗೆ ಮುಂದುವರೆದರೆ ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ತಕ್ಷಣ ಒತ್ತುವರಿ ಜಾಗವನ್ನು ತೆರವುಗೊಳಿಸಿ ರಾಜಾಕಾಲುವೆ ತ್ವರಿತವಾಗಿ ನಿರ್ಮಿಸಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಡಿಸಿಎಂ ಸ್ಥಳದಲ್ಲೇ ಆದೇಶ ನೀಡಿದರು.

ಇದಕ್ಕೂ ಮುನ್ನ ಯಮಲೂರು ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಒಳಚರಂಡಿ ವ್ಯವಸ್ಥೆಯನ್ನು ವೀಕ್ಷಿಸಿ ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಬೆಳ್ಳಂದೂರು ಕೆರೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com