ಶಕ್ತಿ ಯೋಜನೆ: ಜೂನ್ 11ರಂದು ಕೆಲಹೊತ್ತು ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದರಾಮಯ್ಯ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಭಾರೀ ಸದ್ದು ಮಾಡುತ್ತಿವೆ. ಕಾಂಗ್ರೆಸ್ ಚುನಾವಣಾ ಪೂರ್ವ ನೀಡಿದ್ದ 5 ಖಾತರಿಗಳಲ್ಲಿ 3 ಖಾತರಿಗಳನ್ನು ಜಾರಿಗೆ ತರುವ ದಿನಾಂಕಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿನ್ನೆ ಅಧಿಕೃತವಾಗಿ ಘೋಷಿಸಿದ್ದಾರೆ.
ಅದರಲ್ಲಿ ಮೊದಲನೆಯದಾಗಿ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವಾದ ಶಕ್ತಿ ಯೋಜನೆ(Shakti scheme) ಇದೇ ಭಾನುವಾರ ಜಾರಿಗೆ ಬರಲಿದ್ದು ರಾಜಧಾನಿ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ನಿರ್ವಾಹಕರಾಗಲಿದ್ದಾರೆ ಸಿದ್ದರಾಮಯ್ಯ: ಶಕ್ತಿ ಯೋಜನೆಗೆ ವಿಭಿನ್ನವಾಗಿ ಚಾಲನೆ ನೀಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಅದರಂತೆ ಜೂನ್ 11ರಂದು ಬೆಳಗ್ಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ವಿಧಾನಸೌಧಕ್ಕೆ ತೆರಳುವ ರೂಟ್ ನಂಬರ್ 43ರ ಬಸ್ಸಿನಲ್ಲಿ ಕೆಲಹೊತ್ತು ಸಿಎಂ ಕಂಡಕ್ಟರ್ ಆಗಿ ಮಹಿಳೆಯರಿಗೆ ಶೂನ್ಯದರದ ಟಿಕೆಟ್ ನೀಡಲಿದ್ದಾರೆ. ವಿಧಾನಸೌಧದಿಂದ ಮೆಜೆಸ್ಟಿಕ್ ಗೆ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಾ ಕೆಲಹೊತ್ತು ಪ್ರಯಾಣಿಸಲಿದ್ದಾರೆ.
ಅನಂತರ ವಿಧಾನಸೌಧದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಇಡೀ ರಾಷ್ಟ್ರದ ಗಮನ ಸೆಳೆದಿರುವ ಗ್ಯಾರಂಟಿ ಯೋಜನೆಗಳ ಉದ್ಘಾಟನೆಯೂ ಸಹ ವಿಭಿನ್ನವಾಗಿರಬೇಕು ಎಂಬ ಆಲೋಚನೆಯಲ್ಲಿರುವ ಸಿದ್ದರಾಮಯ್ಯ ಅವರ ಥಿಂಕ್ ಟ್ಯಾಂಕ್ ಈ ಶೈಲಿಯಲ್ಲಿ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಶಕ್ತಿ ಯೋಜನೆ. pic.twitter.com/30iuq6nLv2
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ