ಕೊಡಗು: ಜಪಾನ್ ನಲ್ಲಿ ನಡೆಯಲಿರುವ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ಷಿಪ್ ನಲ್ಲಿ ತಾಯಿ-ಮಗ ಭಾಗಿ!

ಕೊಡಗಿನ ಲೆಫ್ಟಿನೆಂಟ್ ರವಿ ಟಿಎಸ್ ಹಾಗೂ ಅವರ ತಾಯಿ ಇಬ್ಬರೂ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ಷಿಪ್ಸ್ ನಲ್ಲಿ ಭಾಗಿಯಾಗಲು ಶೀಘ್ರವೇ ಜಪಾನ್ ಗೆ ತೆರಳುತ್ತಿದ್ದಾರೆ. 
ಗೆದ್ದಿರುವ ಪದಕಗಳ ಜೊತೆ ಕಮಲಮ್ಮ ಸುರೇಶ್, ಲೆಫ್ಟಿನೆಂಟ್ ರವಿ ಟಿ.ಎಸ್
ಗೆದ್ದಿರುವ ಪದಕಗಳ ಜೊತೆ ಕಮಲಮ್ಮ ಸುರೇಶ್, ಲೆಫ್ಟಿನೆಂಟ್ ರವಿ ಟಿ.ಎಸ್

ಕೊಡಗು: ಕೊಡಗಿನ ಲೆಫ್ಟಿನೆಂಟ್ ರವಿ ಟಿಎಸ್ ಹಾಗೂ ಅವರ ತಾಯಿ ಇಬ್ಬರೂ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ಷಿಪ್ಸ್ ನಲ್ಲಿ ಭಾಗಿಯಾಗಲು ಶೀಘ್ರವೇ ಜಪಾನ್ ಗೆ ತೆರಳುತ್ತಿದ್ದಾರೆ. 

ರವಿ ಅವರ ತಾಯಿ ಎಸ್ಟೇಟ್ ನಲ್ಲಿ ಉದ್ಯೋಗ ಮಾಡಿ ಶ್ರಮಪಟ್ಟು ಜೀವನ ಸಾಗಿಸಿದ್ದರೆ, ರವಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ವಿದ್ಯಾರ್ಥಿವೇತನ ಪಡೆದಿರುವ ಪ್ರತಿಭೆಯಾಗಿದ್ದಾರೆ.
  
ಸೋಮವಾರಪೇಟೆಯ ಶನಿವಾರಸಂತೆ ಬಳಿ ಇರುವ ತಲೂರು ಗ್ರಾಮದಲ್ಲಿ ಜನಿಸಿದ ರವಿ ಬಾಲ್ಯದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು. ಅವರ ತಾಯಿ ಕಮಲಮ್ಮ ಸುರೇಶ್ ಸಹ ಅನೇಕ ಸವಾಲುಗಳ ನಡುವೆ ಸಲಹಿದ್ದಾರೆ. ಇಂದು ಇಬ್ಬರೂ ಸಹ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್ಷಿಪ್ ಗಳಲ್ಲಿ ಹಲವಾರು ಪದಕಗಳನ್ನು ಗೆದ್ದಿದ್ದಾರೆ. 

ತಮ್ಮ ತಾಯಿಯ ಬಗ್ಗೆ ಮಾತನಾಡಿರುವ ರವಿ,  "ನನ್ನ ತಾಯಿ ಜನ್ಮತಃ ಸದೃಢರಾಗಿದ್ದವರು. ಎಸ್ಟೇಟ್ ನಲ್ಲಿ ಶ್ರಮಿಸುತ್ತಿದ್ದ ಆಕೆಯಲ್ಲಿ ಕ್ರೀಡಾಪಟುಗಳಿಗೆ ಇರಬೇಕಾದ ಎಲ್ಲಾ ಗುಣಗಳೂ ಇವೆ.  56 ವರ್ಷದ ವಯಸ್ಸಿನಲ್ಲಿ ಆಕೆ 1.5 ಎಕರೆ ಎಸ್ಟೇಟ್ ನ್ನು ಒಬ್ಬರೇ ನಿಭಾಯಿಸುತ್ತಿದ್ದರು. ಆಕೆ ಇಂದಿಗೂ ಮೆಣಸು  ಬೆಳೆಗಳನ್ನು ಕಟಾವು ಮಾಡುತ್ತಾರೆ, ಎಲ್ಲಾ ರೀತಿಯ ದೈಹಿಕ ಶ್ರಮ ಅಗತ್ಯವಿರುವ ಎಲ್ಲಾ ಕೆಲಸಗಳನ್ನೂ ನಿಭಾಯಿಸುತ್ತಾರೆ ಎಂದು ರವಿ ಹೇಳಿದ್ದಾರೆ. 

ಆಕೆಯಲ್ಲಿದ್ದ ಕ್ರೀಡಾಪಟುವಿನ ಪ್ರತಿಭೆಯನ್ನು ಗುರುತಿಸಿದ ಮಗ ರವಿ ಆಕೆಗೆ ಸಣ್ಣ ಪ್ರಮಾಣದ ಅಥ್ಲೆಟಿಕ್ ತರಬೇತಿಯನ್ನು ನೀಡಿದ್ದರು. "ನನ್ನ ತಾಯಿ ಮೈಸೂರಿಗೆ ಬಂದಾಗಲೆಲ್ಲಾ ಆಕೆಗೆ ನಾನು ತರಬೇತಿ ನೀಡಿ, ಅದನ್ನು ಮನೆಯಲ್ಲಿಯೂ ಅಭ್ಯಾಸ ಮಾಡುವಂತೆ ಹೇಳುತ್ತಿದ್ದೆ. ಇಂದು ಆಕೆ ಹಲವು ಯುವತಿಯರ ಅಥ್ಲೆಟಿಕ್ ದಾಖಲೆಗಳನ್ನು ಸುಲಭವಾಗಿ ಸರಿಗಟ್ಟಲು ಸಮರ್ಥರಿದ್ದಾರೆ" ಎನ್ನುತ್ತಾರೆ ರವಿ. 

ಕಮಲಮ್ಮ ಅವರು ತಮ್ಮ 52 ನೇ ವಯಸ್ಸಿನಲ್ಲಿ,  ಅಂದರೆ 2019 ರಲ್ಲಿ ಅಥ್ಲೆಟಿಕ್ ಕ್ಷೇತ್ರಕ್ಕೆ ಪ್ರವೇಶಿಸಿದರು ಮತ್ತು ಅವರು ಇದುವರೆಗೆ ಎರಡು ರಾಷ್ಟ್ರೀಯ ಮತ್ತು ಎರಡು ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗಳಲ್ಲಿ 500, 1500 ಮೀಟರ್ ಓಟ ಮತ್ತು 400 ಮೀಟರ್ ಹರ್ಡಲ್ಸ್‌ನಲ್ಲಿ ಒಂಬತ್ತು ಪದಕಗಳನ್ನು ಗೆದ್ದಿದ್ದಾರೆ. ತನ್ನ ತಾಯಿಗೆ ಸಹನೆ, ಫಿಟ್‌ನೆಸ್ ಮತ್ತು ತ್ರಾಣವು ಕೃಷಿ ಕೆಲಸದ ಮೂಲಕ ಸ್ವಾಭಾವಿಕವಾಗಿ ಬಂದಿರುವುದಾಗಿದೆ ಎಂದು ರವಿ ವಿವರಿಸುತ್ತಾರೆ.

ಕಮಲಮ್ಮ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸಿದರೆ, ರವಿ ಈಗ ಅವಳ ಪ್ರತಿಭೆಯನ್ನು ಸದುಪಯೋಗಪಡಿಸಿಕೊಳ್ಳಲು ತರಬೇತಿ ನೀಡುತ್ತಿದ್ದಾರೆ. ರವಿ ವಾರಾಂತ್ಯದಲ್ಲಿ ಕೊಡಗಿನ ಖಾಸಗಿ ಬಸ್‌ನಲ್ಲಿ ಬಸ್ ಸಹಾಯಕರಾಗಿ ಕೆಲಸ ಮಾಡುತ್ತಾ ವಿದ್ಯಾರ್ಥಿವೇತನದ ಮೂಲಕ ಮೈಸೂರಿನಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು. ಮತ್ತು ಅವರಿಗೆ, ಕ್ರೀಡೆಗಳು ಉತ್ತಮ ಜೀವನಕ್ಕೆ ದಾರಿ ಮಾಡಿಕೊಟ್ಟವು. “ಕಡು ಬಡತನದ ಕಾರಣದಿಂದ ನಾನು ಕ್ರೀಡಾ ಕ್ಷೇತ್ರಕ್ಕೆ ಬಂದೆ. ಮನೆಯಲ್ಲಿ ನಮಗೆ ಪಾತ್ರೆಗಳಿರಲಿಲ್ಲ. ಆದರೆ, ನನ್ನ ಸಹೋದರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ, ನಾನು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೇನೆ ಮತ್ತು ನಾವು ಬಹುಮಾನಗಳನ್ನು ಗೆದ್ದಿದ್ದೇವೆ. ಅಂದಿನ ಪಾತ್ರೆಗಳೇ ಇಂದಿಗೂ ನನ್ನ ಮನೆಯಲ್ಲಿ  ಬಳಕೆಯಾಗುತ್ತಿವೆ’ ಎಂದು ರವಿ ನೆನಪಿಸಿಕೊಂಡರು.

ರವಿ  ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳಲ್ಲಿ 91 ಪದಕಗಳನ್ನು ಗೆದ್ದಿದ್ದಾರೆ ಮತ್ತು ದೈಹಿಕ ತರಬೇತಿಯಲ್ಲಿ ಯಶಸ್ವಿ ವೃತ್ತಿಜೀವನದ ಮೂಲಕ ತಮ್ಮದೇ ಆದ ಸ್ಥಾನವನ್ನು ಹೊಂದಿದ್ದಾರೆ. ರವಿ  13 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿಗೆ ಅಪಾರ ಕೊಡುಗೆ ನೀಡಿದ ನಂತರ ಲೆಫ್ಟಿನೆಂಟ್ ಶ್ರೇಣಿಯನ್ನು ಗಳಿಸಿದ್ದರೂ ಸಹ ಅವರು ಕ್ರೀಡಾ ಸಂಘಗಳಲ್ಲಿನ ವಿವಿಧ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ರವಿ ಅವರು ವಿದ್ಯಾರ್ಥಿಗಳು, ಮಿಲಿಟರಿ ಮತ್ತು ಪೊಲೀಸ್ ಆಕಾಂಕ್ಷಿಗಳಿಗೆ ಉಚಿತ ದೈಹಿಕ ತರಬೇತಿಯನ್ನೂ ನೀಡುತ್ತಿದ್ದು, ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದೈಹಿಕ ಶಿಕ್ಷಣ ವಿಭಾಗದಲ್ಲಿ ಎಡಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com