ಎಲ್ಲಾ ಶಾಸಕರು ಜೂನ್ 30ರೊಳಗೆ ಆಸ್ತಿ ವಿವರ ಸಲ್ಲಿಸಿ, ಇಲ್ಲವೇ ಶಿಸ್ತು ಕ್ರಮ ಎದುರಿಸಿ: ಲೋಕಾಯುಕ್ತ ನ್ಯಾಯಮೂರ್ತಿ ಆದೇಶ
ಭ್ರಷ್ಟ ರಾಜಕಾರಣಿಗಳು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸುವುದು ಸಾಮಾನ್ಯ.ಇದೀಗ ಕರ್ನಾಟಕದ ಶಾಸಕರ ಅಕ್ರಮ ಆಸ್ತಿಗಳ ಮೇಲೆ ಹದ್ದಿನ ಕಣ್ಣಿಡಲು ಲೋಕಾಯುಕ್ತ ಮುಂದಾಗಿದೆ.
Published: 09th June 2023 01:06 PM | Last Updated: 09th June 2023 07:18 PM | A+A A-

ಲೋಕಾಯುಕ್ತ
ಬೆಂಗಳೂರು: ಭ್ರಷ್ಟ ರಾಜಕಾರಣಿಗಳು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸುವುದು ಸಾಮಾನ್ಯ.ಇದೀಗ ಕರ್ನಾಟಕದ ಶಾಸಕರ ಅಕ್ರಮ ಆಸ್ತಿಗಳ ಮೇಲೆ ಹದ್ದಿನ ಕಣ್ಣಿಡಲು ಲೋಕಾಯುಕ್ತ ಮುಂದಾಗಿದೆ.
ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ(Karnataka Assembly Elections 2023) ಗೆಲುವು ಸಾಧಿಸಿರುವ ಎಲ್ಲಾ 224 ಶಾಸಕರಿಗೂ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಆದೇಶ ನೀಡಿದ್ದಾರೆ. ಇದೇ ಜೂನ್ 30ರೊಳಗೆ ಎಲ್ಲಾ ಶಾಸಕರ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಗಡುವು ನೀಡಿದ್ದಾರೆ. ಆದೇಶ ನೀಡಿ 15 ದಿನ ಕಳೆದರೂ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಹೀಗಾಗಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಎಲ್ಲಾ ಪಕ್ಷದ ಶಾಸಕರ ಆಸ್ತಿ ವಿವರ ಪಡೆದು ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಮೌಖಿಕ ಸೂಚನೆ ನೀಡಿದ್ದಾರೆ.
ಕಳೆದ ಬಾರಿ ಆಸ್ತಿ ವಿವರ ಸಲ್ಲಿಸಿದ್ದೇವೆಂದು ಸುಮ್ಮನಿರುವಂತಿಲ್ಲ. ಪುನರ್ ಆಯ್ಕೆಯಾದ ಶಾಸಕರು ಮತ್ತೊಮ್ಮೆ ಆಸ್ತಿ ವಿವರ ಸಲ್ಲಿಸಬೇಕು. ಮೊದಲ ಬಾರಿ ಆಯ್ಕೆಯಾದ ಶಾಸಕರು ಕೂಡ ಆಸ್ತಿ ವಿವರ ಸಲ್ಲಿಸಬೇಕು. ಒಂದು ವೇಳೆ ಜೂ.30ರೊಳಗೆ ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಬಾರಿ ದಾಖಲೆಗಳ ಸಮೇತ ಮತ್ತೆ ಆಸ್ತಿ ವಿವರ ಸಲ್ಲಿಸಬೇಕು. ಕಳೆದ ಬಾರಿ ಶಾಸಕರು ಸರಿಯಾದ ಮಾದರಿಯಲ್ಲಿ ಆಸ್ತಿ ವಿವರ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಸಮಸ್ಯೆ ಆಗಬಾರದೆಂದು ಶಾಸಕರ ಕಡ್ಡಾಯ ಆಸ್ತಿ ವಿವರ ಪಡೆಯಲು ಲೋಕಾಯುಕ್ತ ಸೆಕ್ರೆಟರಿಗೆ ಸೂಚಿಸಿದ್ದಾರೆ.