ಟ್ರಾಫಿಕ್‌ ಸಮಸ್ಯೆಗೆ ಪರಿಹಾರ, ಕಸ ನಿರ್ವಹಣೆ ನನ್ನ ಮೊದಲ ಆದ್ಯತೆ: ಡಿಸಿಎಂ ಡಿಕೆಶಿ

ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸುವುದು, ನಗರ ಆಡಳಿತ ಸುಧಾರಣೆ ಮತ್ತು ಕಸ ನಿರ್ವಹಣೆ ನನ್ನ ಮೊದಲ ಆದ್ಯತೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರುವ ಡಿಸಿಎಂ
ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿರುವ ಡಿಸಿಎಂ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸುವುದು, ನಗರ ಆಡಳಿತ ಸುಧಾರಣೆ ಮತ್ತು ಕಸ ನಿರ್ವಹಣೆ ನನ್ನ ಮೊದಲ ಆದ್ಯತೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಕೇಂದ್ರ ಕಚೇರಿಯಲ್ಲಿ, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ಬಿಡಿಎ ಆಯುಕ್ತ ಕುಮಾರ್ ನಾಯಕ್ ಸೇರಿದಂತೆ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ನಂತರ ಬೆಂಗಳೂರು ಪ್ರದಕ್ಷಣೆ ಹಾಕಿದ ಶಿವಕುಮಾರ್ ಅವರು ಮೊದಲು ಹೆಬ್ಬಾಳ ಜಂಕ್ಷನ್ ಗೆ ಭೇಟಿ ನೀಡಿ ಮೇಲ್ಸೇತುವೆ ನಿರ್ಮಾಣ, ಸುತ್ತಮುತ್ತಲ ಪ್ರದೇಶದ ಪರಿಶೀಲನೆ ನಡೆಸಿದರು.

ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಪರಿಹರಿಸಲು ಜಾಗತಿಕವಾಗಿ ಗುರುತಿಸಲ್ಪಟ್ಟ ತಜ್ಞರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಾಗುವುದು ಎಂದು ಸಭೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸಂಚಾರ ದಟ್ಟಣೆಯೇ ದೊಡ್ಡ ಸಮಸ್ಯೆಯಾಗಿದೆ. ಎಲ್ಲರೂ ಇದಕ್ಕೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಶನಿವಾರ ಸಭೆ ಏರ್ಪಡಿಸಲಾಗಿದ್ದು, ಬೆಂಗಳೂರಿಗೆ ಕೊಡುಗೆ ನೀಡಿದವರ ಸಲಹೆ ಪಡೆಯಲಾಗುವುದು ಎಂದರು. ಆದಾಗ್ಯೂ ಸಾರ್ವಜನಿಕರು ಮತ್ತು ವಾಹನ ಚಾಲಕರ ಸಲಹೆಗಳನ್ನು ಸ್ವೀಕರಿಸಿದ ನಂತರ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದರು.

ಬೆಂಗಳೂರು ಇನ್ನಷ್ಟು ಪ್ರಗತಿಯಾಗಬೇಕು ಮತ್ತು ಇದಕ್ಕಾಗಿ ಯಾವುದೇ ಮಾರ್ಗದರ್ಶನ ಮತ್ತು ಸಲಹೆಗಳಿದ್ದರು ಸ್ವಾಗತಿಸುವುದಾಗಿ ಡಿಸಿಎಂ ಹೇಳಿದರು.

ನಗರದಲ್ಲಿ ಅಕ್ರಮ ಹೋರ್ಡಿಂಗ್‌ಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಜಾಹೀರಾತು ಸೇರಿದಂತೆ ಇತರ ಎಲ್ಲಾ ಚಟುವಟಿಕೆಗಳನ್ನು ಕಾನೂನಿನ ಚೌಕಟ್ಟಿನೊಳಗೆ ಮಾಡಬೇಕು. ನಾನು ಜಾಹೀರಾತು ಮೂಲಕ ಉದ್ಯೋಗಾವಕಾಶವನ್ನು ಬಯಸುತ್ತೇನೆ. ಆದರೆ ಅಡ್ಡಾದಿಡ್ಡಿ ಜಾಹೀರಾತುಗಳನ್ನು ಅನುಮತಿಸುವುದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com