ಲೋಕಾಯುಕ್ತ ಮರು ಸ್ಥಾಪನೆ ಮಾಡಿದ್ದೇ ಭ್ರಷ್ಟಚಾರ ನಿಗ್ರಹಕ್ಕೆ, ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗುತ್ತದೆ: ಸಿಎಂ ಬೊಮ್ಮಾಯಿ

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಕಚೇರಿ ಮತ್ತು ನಿವಾಸದ ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ನಗದು ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಬೊಮ್ಮಾಯಿ ಮತ್ತು ಮಾಡಾಳ್ ಪ್ರಶಾಂತ್(ಸಂಗ್ರಹ ಚಿತ್ರ)
ಸಿಎಂ ಬೊಮ್ಮಾಯಿ ಮತ್ತು ಮಾಡಾಳ್ ಪ್ರಶಾಂತ್(ಸಂಗ್ರಹ ಚಿತ್ರ)

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಕಚೇರಿ ಮತ್ತು ನಿವಾಸದ ಲೋಕಾಯುಕ್ತ ದಾಳಿ ವೇಳೆ ಕೋಟಿ ಕೋಟಿ ನಗದು ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕರ ಪುತ್ರನ ನಿವಾಸ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ, ನಾವು ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದೇವೆ. ಎಸಿಬಿ ರಚಿಸಿ ಲೋಕಾಯುಕ್ತ ಹಲ್ಲು ಕೀಳುವ ಪ್ರಯತ್ನ ನಾವು ಮಾಡಿಲ್ಲ, ಅದನ್ನು ಮಾಡಿರುವುದು ಕಾಂಗ್ರೆಸ್. ಲೋಕಾಯುಕ್ತಕ್ಕೆ ಸಂಪೂರ್ಣ ಮುಕ್ತ ಅಧಿಕಾರ ನೀಡುವ ಮರು ಆದೇಶ ನೀಡಿ ಲೋಕಾಯುಕ್ತವನ್ನು ಮರುಸ್ಥಾಪಿಸಿದ್ದೇ ಬಿಜೆಪಿ ಸರ್ಕಾರ. ಲೋಕಾಯುಕ್ತ ಇರುವುದೇ ಇಂತಹ ಭ್ರಷ್ಟಾಚಾರ ನಿಗ್ರಹಕ್ಕೆ, ಅದು ಸರ್ವಸ್ವತಂತ್ರವಾಗಿದೆ. ಲೋಕಾಯುಕ್ತ ಮುಕ್ತವಾಗಿ ಸಮಗ್ರ ತನಿಖೆ ನಡೆಸಲಿ, ಮುಕ್ತವಾಗಿ ತನಿಖೆ ನಡೆದು ಹಣ ಯಾರಿಗೆ ಸೇರಿದೆ ಎನ್ನುವ ಮಾಹಿತಿ ಹೊರಗೆ ಬರಲಿ, ಸತ್ಯ ಜನರಿಗೆ ತಿಳಿದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ. 

ಹಿಂದೆ ಕಾಂಗ್ರೆಸ್ ಸರ್ಕಾರದ ಅಧಿಕಾರವಧಿಯಲ್ಲಿ ಇಂತಹ ಹತ್ತಾರು ಪ್ರಕರಣಗಳು ನಡೆದಿವೆ ಮತ್ತು ಅಲ್ಲಲ್ಲೇ ಮುಚ್ಚಿಹೋಗಿವೆ. ಇಂದು ಬಿಜೆಪಿ ವಿರುದ್ಧ ಇನ್ನಿಲ್ಲದ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಅಂದು ಎಸಿಬಿ ರಚಿಸಿ ಇಂತಹ ಪ್ರಕರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದೇ ಕಾಂಗ್ರೆಸ್ ನವರು, ಹೀಗಾಗಿ ಇಂದು ಬಿಜೆಪಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗೆಲ್ಲಿದೆ ಎಂದು ಕೇಳಿದರು.

ನಿನ್ನೆ ಸಾಯಂಕಾಲದಿಂದ ಇಂದು ಬೆಳಗಿನವರೆಗೆ ಬಿಡಬ್ಲ್ಯುಎಸ್ ಎಸ್ ಬಿ ಅಧಿಕಾರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ನಿವಾಸ ಮತ್ತು ಕಚೇರಿ ಮೇಲೆ ನಡೆಸಿದ ದಾಳಿಯಲ್ಲಿ ಲೋಕಾಯುಕ್ತ ಸಿಬ್ಬಂದಿಗೆ ಬರೋಬ್ಬರಿ 6 ಕೋಟಿ ರೂಪಾಯಿ ನಗದು ಸಿಕ್ಕಿದೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ(KSDL) ಟೆಂಡರ್ ಗೆ ಸಂಬಂಧಿಸಿದ ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ  ಮಾಡಾಳ್ ಪ್ರಶಾಂತ್ ನನ್ನು ಇಂದು ಲೋಕಾಯುಕ್ತ ಪೊಲೀಸರು ನ್ಯಾಯಾಲಯ ಮುಂದೆ ಹಾಜರುಪಡಿಸಿ ಇನ್ನಷ್ಟು ವಿಚಾರಣೆಗೆ ಕಾಲಾವಕಾಶ ಕೇಳುವ ಸಾಧ್ಯತೆಯಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com