ಕಂದಾಯ ಇಲಾಖೆಯಲ್ಲಿ ಬದಲಾವಣೆ ಪರ್ವ: ಆನ್ ಲೈನ್ ನಲ್ಲಿ ಆಸ್ತಿ ನೋಂದಣಿ ಶೀಘ್ರವೇ ಜಾರಿ; ಕಾವೇರಿ–2 ತಂತ್ರಾಂಶಕ್ಕೆ ಸಚಿವ ಆರ್.ಅಶೋಕ್ ಚಾಲನೆ
ಆಸ್ತಿಗಳ ನೋಂದಣಿ ಪ್ರಕ್ರಿಯೆ ಸರಳಗೊಳಿಸುವ, ಕೇವಲ 10 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ನಾಗರಿಕ ಸ್ನೇಹಿ ಕಾವೇರಿ–2 ತಂತ್ರಾಂಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಗುರುವಾರ ಚಾಲನೆ ನೀಡಿದರು.
Published: 03rd March 2023 08:58 AM | Last Updated: 03rd March 2023 07:27 PM | A+A A-

ಆರ್.ಅಶೋಕ್
ಬೆಂಗಳೂರು: ಆಸ್ತಿಗಳ ನೋಂದಣಿ ಪ್ರಕ್ರಿಯೆ ಸರಳಗೊಳಿಸುವ, ಕೇವಲ 10 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ನಾಗರಿಕ ಸ್ನೇಹಿ ಕಾವೇರಿ–2 ತಂತ್ರಾಂಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಗುರುವಾರ ಚಾಲನೆ ನೀಡಿದರು.
ಕಾವೇರಿ.2 ಸಾಫ್ಟ್‌ವೇರ್‌ನ ಯಶಸ್ವಿ ಪ್ರಯೋಗದ ನಂತರ, ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಎಲ್ಲಾ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ. ಈ ತಂತ್ರಾಂಶ ವಿನೂತನ, ನಾಗರೀಕ ಸ್ನೇಹಿಯಾಗಿದೆ. ಮಧ್ಯವರ್ತಿಗಳ ಹಾವಳಿ ಕಡಿಮೆ ಆಗಲಿದೆ. ವರ್ಷದೊಳಗೆ ಕೈಯಲ್ಲಿ ಅರ್ಜಿ ಹಾಕುವುದನ್ನು ತಪ್ಪಿಸಿ, ಆನ್ ಲೈನ್ ಮಾಡುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಮೂರು ತಿಂಗಳಲ್ಲಿ ಎಲ್ಲಾ ಕಡೆ ಪ್ರಾರಂಭವಾಗಲಿದೆ. ಆಸ್ತಿ, ವಿವಾಹ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾರೀತಿಯ ನೋಂದಣಿಗಳು ಆನ್ ಲೈನ್ ಮಾಡಲಾಗುವುದು ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ನೋಂದಣಿ ಮಾಡುವ ಮೊದಲು, ಮನೆಯಲ್ಲೇ ಕುಳಿತು ಡೀಡ್ ಅನ್ನು ಉಪನೋಂದಣಾಕಾರಿ ಕಚೇರಿಗೆ ಕಳಿಸಿದರೆ ಅದರಲ್ಲಿ ಉಪನೋಂದಣಾಧಿಕಾರಿ ತಪ್ಪಿದ್ದರೆ ತಿದ್ದಿ ಕಳುಹಿಸುತ್ತಾರೆ. ಬಳಿಕ ಎಲ್ಲವೂ ಸರಿಯಾಗಿದ್ದರೆ ನಿಗದಿತ ಹಣ ಕಟ್ಟಲು ಸೂಚನೆ ಸೂಚಿಸುತ್ತಾರೆ. ಎಲ್ಲವೂ ಸರಿಯಾದ ಬಳಿಕ ಸ್ಲಾಟ್ ಬುಕ್ ಮಾಡಲಾಗುವುದು. ಆ ಸಮಯದಲ್ಲಿ ಹೋಗಿ, ಮುಖ, ಸಹಿ, ಹೆಬ್ಬೆಟ್ಟು ಹಾಕಿ ನೋಂದಣಿ ಮಾಡಿಸಿಕೊಳ್ಳಬಹುದು. ಇದರಿಂದ ಡೇಟಾ ಎಂಟ್ರಿ ಕಡಿಮೆ ಆಗಲಿದೆ. ಅನ್ ಲೈನ್‍ಲ್ಲೇ ಇ.ಸಿ ಮತ್ತು ಪ್ರಮಾಣಪತ್ರ ಪಡೆಯಬಹುದು ಎಂದು ಹೇಳಿದ್ದಾರೆ.
ಕಾವೇರಿ ತಂತ್ರಜ್ಞಾನ 2.0 ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಇದನ್ನು ಬೆಳಗಾವಿ ದಕ್ಷಿಣ, ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿದೆ. ಡಿ.ಡಿ ಮತ್ತು ಚಲನ್ ಹಿಂದೆ ಸ್ಕ್ಯಾಮ್ ಆಗಿತ್ತು. ಯಾರೊದ್ದೋ ಹೆಸರಿಗೆ ಡಿ.ಡಿ ಹೋಗುತ್ತಿತ್ತು. ಈಗ ಅವರ ಬ್ಯಾಂಕ್ ಅಕೌಂಟಿಂದ ನೇರವಾಗಿ ಇಲಾಖೆ ಖಾತೆಗೆ ವರ್ಗಾವಣೆ ಆಗಲಿದೆ. ಸರ್ವರ್ ಸಮಸ್ಯೆ ಕೂಡ ಇರೋದಿಲ್ಲ. ಉಪನೋಂದಣಾಕಾರಿ ಕಚೇರಿಯಲ್ಲಿ ಜನರ ಗುಂಪು ಕೂಡ ಇರೋದಿಲ್ಲ. ಅವರ ಸಮಯದಲ್ಲಿ ಬಂದು ಹೋಗಬಹುದು. ಮದ್ಯವರ್ತಿಗಳ ಹಾವಳಿ ಇರೋದಿಲ್ಲ. ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಉಪನೋಂದಣಾಕಾರಿ ಇನ್ನು ಮುಂದೆ ಪಾಸ್ ಪೋರ್ಟ್ ಕಚೇರಿ ರೀತಿ ಕಾರ್ಯ ನಿರ್ವಹಿಸಲಿದೆ. ಲಿಫ್ಟ್, ವಿಕಲಚೇತನರ ರ್ಯಾಂಪ್ ಎಲ್ಲವೂ ಇರಲು ಸೂಚಿಸಲಾಗಿದೆ. ವಿವಿಧ ಕಚೇರಿಗಳಲ್ಲಿ ಇದನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಬಿಎಂಪಿಯಿಂದ ಎಲ್ಲ ಸ್ವತ್ತುಗಳಿಗೆ ಫೆ.27 ರಿಂದ ಖಾತಾ ಆಂದೋಲನ, 4 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಗುರಿ
ನಾಗರಿಕರು ಎಲ್ಲ ದಾಖಲೆಗಳನ್ನು ಮನೆಯಲ್ಲೇ ಕುಳಿತು ತಂತ್ರಾಂಶಕ್ಕೆ ಅಪ್‌ಲೋಡ್ ಮಾಡಬಹುದು. ಶುಲ್ಕವನ್ನು ಲೆಕ್ಕ ಹಾಕಿಕೊಳ್ಳಬಹುದು. ಪ್ರತಿ ಹಂತದಲ್ಲೂ ಮೊಬೈಲ್ ಸಂದೇಶ ರವಾನಿಸಲಾಗುತ್ತದೆ. ಉಪ ನೋಂದಣಾಧಿಕಾರಿಯು ಆನ್‌ಲೈನ್‌ನಲ್ಲೇ ದಾಖಲೆಗಳನ್ನು ಪರಿಶೀಲಿಸಿದ ನಂತರ ತಮಗೆ ಅನುಕೂಲವಾಗುವ ನೋಂದಣಿ ದಿನ, ಸಮಯವನ್ನು ಜನರು ಆಯ್ಕೆ ಮಾಡಿಕೊಳ್ಳಬಹುದು. ಮೊಬೈಲ್‌ನಲ್ಲೇ ಚಲನ್ ಪಡೆದು, ಹಣ ಪಾವತಿಸಬಹುದು. ಕಚೇರಿಗೆ ಭೇಟಿ ನೀಡಿದ 10 ನಿಮಿಷದೊಳಗೆ ಎಲ್ಲ ಪ್ರಕ್ರಿಯೆಗಳೂ ಪೂರ್ಣಗೊಳ್ಳಲಿವೆ ಎಂದು ವಿವರಿಸಿದರು.
ಪ್ರತಿ ಹಂತದ ಅಧಿಕಾರಿ, ಸಿಬ್ಬಂದಿಗೂ ಜವಾಬ್ದಾರಿ ನಿಗದಿ ಮಾಡಲಾಗಿದ್ದು, ತಪ್ಪಿತಸ್ಥರನ್ನು ಸುಲಭವಾಗಿ ಗುರುತಿಸಿ ಹೊಣೆಗಾರರನ್ನಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ದತ್ತಾಂಶಗಳ ಸುರಕ್ಷತೆಗೆ ಒತ್ತು ನೀಡಲಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯ ಜತೆಗೆ, ಜಿಲ್ಲಾ, ಕೇಂದ್ರ ಕಚೇರಿಗಳ ಕಾರ್ಯವಿಧಾನಗಳೂ ಸುಗಮವಾಗಲಿವೆ ಎಂದರು. ಕಾಲ್ ಸೆಂಟರ್ ಆರಂಭ ಮಾಡಿದ್ದು 080-68265316. ಹೆಚ್ಚು ರಿಜಿಸ್ಟ್ರೇಷನ್ ಮಾಡುವ ಕ್ರೆಡಾಯ್‌ಗೆ, ಸಾರ್ವಜನಿಕರಿಗೆ, ಮಾದ್ಯಮಗಳಿಗೂ ವರ್ಕ್ ಶಾಪ್ ಮಾಡ್ತಿದ್ದೇವೆ ಎಂದರು.