ಹೈಕೋರ್ಟ್ ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಗುತ್ತಿದ್ದಂತೆ ಸ್ವಗ್ರಾಮದಲ್ಲೆ ಪ್ರತ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದೇನು?

ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದು ಪುತ್ರನ ಭ್ರಷ್ಟಾಚಾರ ಕರ್ಮಕಾಂಡ ಹೊರಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿನ್ನೆ ಹೈಕೋರ್ಟ್ ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷರಾದರು.
ಮಾಡಾಳ್ ವಿರೂಪಾಕ್ಷಪ್ಪ
ಮಾಡಾಳ್ ವಿರೂಪಾಕ್ಷಪ್ಪ

ದಾವಣಗೆರೆ: ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದು ಪುತ್ರನ ಭ್ರಷ್ಟಾಚಾರ ಕರ್ಮಕಾಂಡ ಹೊರಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿನ್ನೆ ಹೈಕೋರ್ಟ್ ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷರಾದರು.

ಬೆಂಬಲಿಗರಿಂದ ಮೆರವಣಿಗೆ: ನಿನ್ನೆ ಮಧ್ಯಾಹ್ನ ಚನ್ನಗಿರಿ ತಾಲೂಕಿನ ಸ್ವಗ್ರಾಮ ಚನ್ನೇಶಪುರದಲ್ಲಿ ದಿಢೀರ್‌ ಪ್ರತ್ಯಕ್ಷವಾಗಿದ್ದಾರೆ.ಅವರ ಬೆಂಬಲಿಗರು ಕಾರಿನಲ್ಲಿ ಮೆರವಣಿಗೆ ನಡೆಸಿ ಪೂರ್ಣಕುಂಭ ಸ್ವಾಗತ ನೀಡಿದರು. ಸ್ವಗ್ರಾಮಕ್ಕೆ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಆಗಮಿಸುತ್ತಿದ್ದಂತೆ ಬೆಂಬಲಿಗರು ಹೂವಿನ ಹಾರ ಹಾಕಿ, ಕಾರಿನಲ್ಲಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿ ಮಾಡಾಳ್‌ ಪರ ಘೋಷಣೆ ಕೂಗಿದರು. 

ಬೆಂಬಲಿಗರು ನಮ್ಮ ನಾಯಕರ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ಘೋಷಣೆ ಕೂಗಿದರು. ಕಾಂಗ್ರೆಸ್‌ಗೆ ಧಿಕ್ಕಾರ ಕೂಗಿದರು.

ಕಳೆದ ಗುರುವಾರ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಕಾರ್ಖಾನೆ(KSDL) ನಿಗಮಕ್ಕೆ ಟೆಂಡರ್‌ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಾಡಾಳ್‌ ಅವರ 2ನೇ ಪುತ್ರ ಪ್ರಶಾಂತ್‌ ಮಾಡಾಳ್‌ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಆ ಬಳಿಕ ಏಕಾಏಕಿ ಮಾಡಾಳ್‌ ವಿರೂಪಾಕ್ಷಪ್ಪ ಕಣ್ಮರೆಯಾಗಿದ್ದರು. ಲೋಕಾಯುಕ್ತ ಅಧಿಕಾರಿಗಳು, ಪೊಲೀಸರು ಚನ್ನಗಿರಿ, ದಾವಣಗೆರೆ, ಬೆಂಗಳೂರಿನ ಮನೆ, ಕಚೇರಿಗಳಿಗೆ ನೋಟಿಸ್‌ ನೀಡಿ, ಮಾಡಾಳ್‌ ಬಂಧನಕ್ಕೆ ತಲಾಶ್‌ ನಡೆಸುತ್ತಿದ್ದರು.

ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್: ವಿರೋಧ ಪಕ್ಷ ಕಾಂಗ್ರೆಸ್‌ ಶಾಸಕರು ನಾಪತ್ತೆಯಾಗಿದ್ದಾರೆ, ರಾಜ್ಯ ಸರ್ಕಾರವೇ ಸೂಕ್ತ ತನಿಖೆ ನಡೆಸುತ್ತಿಲ್ಲ ಎಂದು ಕಿಡಿಕಾರಿದ್ದರು. ಇನ್ನೊಂದೆಡೆ ವಿದೇಶಕ್ಕೆ ಪರಾರಿಯಾಗುತ್ತಾರೆ ಎಂದು ಎಂಬ ವದಂತಿಗಳು ಹರಿದಾಡಿದ್ದವು. ಇತ್ತ ಸೋಮವಾರ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಮಂಗಳವಾರ ಮಧ್ಯಾಹ್ನ ಜಾಮೀನು ಮಂಜೂರಾಗಿತ್ತು. ಇದರೊಂದಿಗೆ ಬಂಧನ ಭೀತಿಯೂ ದೂರಾಗಿತ್ತು. ಈ ಬೆನ್ನಲ್ಲೆ ಚನ್ನಗಿರಿ ಸಮೀಪದ ಸ್ವಗ್ರಾಮ ಚನ್ನೇಶಪುರದಲ್ಲಿ ಮಾಡಾಳ್‌ ಪ್ರತ್ಯಕ್ಷವಾಗಿದ್ದಾರೆ.

48 ಗಂಟೆಯಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವೆ: ಆಡಳಿತ ಪಕ್ಷದ ಶಾಸಕರೊಬ್ಬರ ನಿವಾಸ, ಕಚೇರಿ ಮೇಲೆ ಈ ರೀತಿ ದಾಳಿಯಾಗಿರುವುದು, ಆರೋಪ ಬಂದಿರುವುದು ಇದೇ ಮೊದಲು, ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಇದೆಲ್ಲದಕ್ಕೂ ಇನ್ನು 48 ಗಂಟೆಗಳಲ್ಲಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ಎಲ್ಲವನ್ನೂ ಹೇಳುತ್ತೇನೆ. ನಾನು ಎಲ್ಲಿಗೂ ಓಡಿಹೋಗಿರಲಿಲ್ಲ. ಇಲ್ಲಿಯೇ ಇದ್ದೆ, ಈ ರೀತಿ ಗಂಭೀರ ಆರೋಪ ಬಂದಿದ್ದರಿಂದ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲವಷ್ಟೆ. ಊರಿನಲ್ಲೇ ಇದ್ದೆ ಎಂದು ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದ್ದಾರೆ.

ಅಡಿಕೆ ಮಾರಿ ಬಂದ ಹಣ: ಅಡಿಕೆ ತೋಟ, ಕ್ರಷರ್‌ನಿಂದದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೆವು, ಲೋಕಾಯುಕ್ತ ದಾಳಿ ವೇಳೆ ಸಿಕ್ಕ ಹಣವನ್ನು ವಶಕ್ಕೆ ಪಡೆದಿದ್ದಾರೆ. ಆ ಹಣಕ್ಕೆ ನಮ್ಮ ಬಳಿ ದಾಖಲೆಯಿದೆ, ಮತ್ತೆ ಪಡೆದುಕೊಳ್ಳುತ್ತೇವೆ. ಕೆಎಸ್‌ಡಿಎಲ್‌ ಅಧ್ಯಕ್ಷನಾಗಿ ನಿಯಮಬಾಹಿರ ಕೆಲಸ ಮಾಡಿಲ್ಲ, ಪಕ್ಷ ತಾಯಿಯಿದ್ದಂತೆ, ಪಕ್ಷಕ್ಕೆ ಎಂದೂ ದ್ರೋಹ ಮಾಡುವುದಿಲ್ಲ, ಸಿಎಂ ಬೊಮ್ಮಾಯಿ ನಿಷ್ಪಕ್ಷಪಾತ ತನಿಖೆ ಮಾಡುವುದಾಗಿ ಹೇಳಿದ್ದಾರೆ. 48 ಗಂಟೆಯೊಳಗೆ ತನಿಖಾಧಿಕಾರಿ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

ಮಾಡಾಳ್‌ ಪಕ್ಷದಿಂದ ಉಚ್ಚಾಟನೆ?: ಭ್ರಷ್ಟಾಚಾರ ಆರೋಪ ಹಿನ್ನೆಲೆ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡುವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಸಂಜೆ ಅಥವಾ ಬುಧವಾರ ಮಾಡಾಳ್‌ ಅವರಿಗೆ ಪಕ್ಷದಿಂದ ನೋಟಿಸ್‌ ಬರಲಿದೆ ಎನ್ನಲಾಗಿದೆ.

ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಡಾಳ್ ವಿರೂಪಾಕ್ಷಪ್ಪಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್ ಸಿಗುವುದು ಸಂಶಯ ಎಂದು ಹೇಳಲಾಗುತ್ತಿದೆ. ಶಿವಮೊಗ್ಗ ಮೂಲದ ವೈದ್ಯರನ್ನು ಚನ್ನಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ನಿಲ್ಲಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. 

ಆದರೆ ತಮಗೆ ಯಾವುದೇ ನೊಟೀಸ್ ಬಂದಿಲ್ಲ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com