ಹೃದಯಾಘಾತದಿಂದ ಆರ್.ಧ್ರುವನಾರಾಯಣ ನಿಧನ: ಕೆಪಿಸಿಸಿ ಕಾರ್ಯಾಧ್ಯಕ್ಷರ ಅಂತಿಮ ಕ್ಷಣಗಳು; ಕೆಲವೇ ಕೆಲವು ನಿಮಿಷಗಳಲ್ಲಿ ಎಲ್ಲವೂ ಮುಗಿದಿತ್ತು!
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರು ಶನಿವಾರ ಬೆಳಗ್ಗೆ ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಒಂಟಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೂ ಅವರು ಬದುಕುಳಿದಿಲ್ಲ. ಧ್ರುವನಾರಾಯಣ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
Published: 11th March 2023 10:28 AM | Last Updated: 11th March 2023 01:33 PM | A+A A-

ಆರ್. ಧ್ರುವನಾರಾಯಣ
ಮೈಸೂರು: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರು ಶನಿವಾರ ಬೆಳಗ್ಗೆ ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಒಂಟಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೂ ಅವರು ಬದುಕುಳಿದಿಲ್ಲ. ಧ್ರುವನಾರಾಯಣ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್.ಧ್ರುವನಾರಾಯಣ ಅವರು ನಿಧನದ ಹಿಂದಿನ ಕಾರಣವನ್ನು ಅವರನ್ನು ಕಡೇ ಘಳಿಗೆಯಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿದ ವೈದ್ಯರ ತಂಡದಲ್ಲಿ ಒಬ್ಬರಾದ ಮಂಜುನಾಥ್ ಅವರು ವಿವರಣೆ ನೀಡಿದ್ದಾರೆ. ಅವರ ಕಡೆಯ ಕ್ಷಣಗಳು ಹೇಗಿದ್ದವು ಎಂಬುದರ ಮಾಹಿತಿ ಹಂಚಿಕೊಂಡಿದ್ದಾರೆ.
ಮೈಸೂರಿನಲ್ಲಿದ್ದ ಧ್ರುವನಾರಾಯಣ ಅವರಿಗೆ ಮುಂಜಾನೆ ಸುಮಾರು 6:30ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿದೆ. ತೀವ್ರ ಅಸ್ವಸ್ಥತೆಯಿಂದಾಗಿ ಆಸ್ಪತ್ರೆಗೆ ಆಗಮಿಸಿದ ಧ್ರುವನಾರಾಯಣ್ ಅವರನ್ನು ವೈದ್ಯರ ತಂಡ ಚಿಕಿತ್ಸೆಗೊಳಪಡಿಸಿದೆ. ಆಸ್ಪತ್ರೆಗೆ ಆಗಮಿಸಿದ್ದಾಗಲೇ ಅವರು ಕೋಮಾ ಸ್ಥಿತಿಗೆ ಹೋಗಿದ್ದರೆಂದು ಮಂಜನಾಥ್ ತಿಳಿಸಿದ್ದಾರೆ. ಅವರಿಗೆ ತೀವ್ರ ರಕ್ತವಾಂತಿಯಾಗಿದ್ದು, ಅತಿಯಾದ ರಕ್ತಸ್ರಾವ ಉಂಟಾಗಿದ್ದರಿಂದ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದರು ಎಂದು ಹೇಳಿದ್ದಾರೆ.
ಹೃದಯಾಘಾತವಾದಾಗ, ರಕ್ತವಾಂತಿಯಾಗಿದೆ. ತೀವ್ರವಾಗಿ ಸುಸ್ತಾಗಿದ್ದ ಅವರು, ಅದೇ ಸಂದರ್ಭದಲ್ಲಿ ದೀರ್ಘವಾಗಿ ಉಸಿರು ಎಳೆದುಕೊಂಡಿದ್ದಾರೆ. ಆಗ, ರಕ್ತವು ಶ್ವಾಸಕೋಶದೊಳಕ್ಕೆ ನುಗ್ಗಿದೆ. ಅದರಿಂದಾಗಿ, ಅವರು ಉಸಿರಾಡಲೂ ಕಷ್ಟಪಡುವಂತಾಗಿದೆ. ಪ್ರಾಯಶಃ ಅದೇ ಅವರ ಸಾವಿಗೆ ಕಾರಣವಾಗಿದೆ ಎನ್ನಬಹುದು ಎಂದು ಡಾ. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ನಿಧನ; ಪ್ರಜಾಧ್ವನಿ ಯಾತ್ರೆ ಸೇರಿ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳು ರದ್ದು
ಹೃದಯಾಘಾತವಾಗಿ ಕೆಲವೇ ನಿಮಿಷಗಳಲ್ಲಿ ಅವರು ಆಸ್ಪತ್ರೆಗೆ ಬಂದಿದ್ದರೆ ಅವರನ್ನು ಉಳಿಸಿಕೊಳ್ಳಬಹುದಾಗಿತ್ತು ಎಂದು ಡಾ. ಮಂಜುನಾಥ್ ಹೇಳಿದ್ದಾರೆ. ಕಾರಿನಲ್ಲಿ ಬರುವಾಗಲೇ ಅವರಿಗೆ ರಕ್ತವಾಂತಿಯಾಗಿದ್ದು, ಸುಮಾರು 3 ಲೀಟರ್ ನಷ್ಟು ರಕ್ತವು ಹೋಗಿರಬಹುದೆಂದು ಅಂದಾಜಿದೆ. ಅಷ್ಟು ರಕ್ತವು ದೇಹದಿಂದ ಆಚೆ ಹೋದಾಗ ಸಾಮಾನ್ಯವಾಗಿ ಅದು ಮಾರಣಾಂತಿಕವಾಗಿರುತ್ತದೆ. ಆಸ್ಪತ್ರೆಗೆ ಬರುವಾಗಲೇ ಅವರು ಸಾವನ್ನಪ್ಪಿದ್ದರು. ಅವರನ್ನು ತಕ್ಷಣವೇ ನಾವು ಚಿಕಿತ್ಸೆಗೆ ಒಳಪಡಿಸಿದಾಗ, ಅವರ ಹೃದಯವು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಹಾಗಾಗಿ, ಆಸ್ಪತ್ರೆಗೆ ಬರುವಷ್ಟರಲ್ಲೇ ಅವರು ನಿಧನರಾಗಿದ್ದರು ಎಂದು ಧ್ರುವ ನಾರಾಯಣ ಅವರ ಕೊನೆಯ ಕ್ಷಣಗಳ ಬಗ್ಗೆ ವೈದ್ಯರು ಮಾಹಿತಿ ಬಿಚ್ಚಿಟ್ಟಿದ್ದಾರೆ.