ಬೆಂಗಳೂರು: ಅರ್ಕಾವತಿ ನಿವೇಶನದಾರರಿಗೆ ಕೆಂಪೇಗೌಡ ಬಡಾವಣೆಯಲ್ಲಿ 378 ಬದಲಿ ನಿವೇಶನ

ರೀಡೂ, ಡಿನೋಟಿಫಿಕೇಶನ್ ಸೇರಿದಂತೆ ಹಲವು ಕಾರಣಗಳಿಂದ ಅರ್ಕಾವತಿ ಬಡಾವಣೆಯಲ್ಲಿ ನಿವೇಶನವನ್ನು ಕಳೆದುಕೊಂಡಿದ್ದ 378 ನಾಗರಿಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ...
ರಾಂಡಮೈಸೇಶನ್ ಮೂಲಕ ಬದಲಿ ನಿವೇಶನ ಹಂಚಿಕೆ
ರಾಂಡಮೈಸೇಶನ್ ಮೂಲಕ ಬದಲಿ ನಿವೇಶನ ಹಂಚಿಕೆ

ಬೆಂಗಳೂರು: ರೀಡೂ, ಡಿನೋಟಿಫಿಕೇಶನ್ ಸೇರಿದಂತೆ ಹಲವು ಕಾರಣಗಳಿಂದ ಅರ್ಕಾವತಿ ಬಡಾವಣೆಯಲ್ಲಿ ನಿವೇಶನವನ್ನು ಕಳೆದುಕೊಂಡಿದ್ದ 378 ನಾಗರಿಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಾಂಡಮೈಸೇಶನ್ ಮೂಲಕ ಗುರುವಾರ ಬದಲಿ ನಿವೇಶನ ಹಂಚಿಕೆ ಮಾಡಲಾಯಿತು.

ಇಂದು ಬಿಡಿಎ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ಜಿ.ಕುಮಾರ ನಾಯಕ್ ಸಮ್ಮುಖದಲ್ಲಿ ಸಾರ್ವಜನಿಕರಿಂದಲೇ ರಾಂಡಮೈಸ್ ಪ್ರಕ್ರಿಯೆ ನಡೆಸಲಾಯಿತು.

20X30 ಚದರಡಿ ಅಳತೆಯ 232 ನಿವೇಶನಗಳು, 30X40 ಅಳತೆಯ 67, 40X60 ಅಳತೆಯ 34 ಹಾಗೂ 50X80 ಅಳತೆಯ 45 ನಿವೇಶನಗಳನ್ನು ರಾಂಡಮೈಸ್ ಮಾಡುವ ಮೂಲಕ ಹಂಚಿಕೆದಾರರಿಗೆ ವಿತರಣೆ ಮಾಡಲಾಯಿತು.

ಎರಡು ದಶಕಗಳ ಹಿಂದೆಯೇ ಅರ್ಕಾವತಿ ಬಡಾವಣೆಯಲ್ಲಿ ಸಾವಿರಾರು ನಾಗರಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಬಹುತೇಕ ಎಲ್ಲಾ ಹಂಚಿಕೆದಾರರಿಗೆ ನೋಂದಣಿಯನ್ನೂ ಮಾಡಿಕೊಡಲಾಗಿತ್ತು. ಆದರೆ, ರೀಡೂ, ಡಿನೋಟಿಫಿಕೇಶನ್ ಸೇರಿದಂತೆ ನಾನಾ ಕಾರಣಗಳಿಂದ 2,000ಕ್ಕೂ ಹೆಚ್ಚು ಜನ ನಿವೇಶನ ಕಳೆದುಕೊಂಡಿದ್ದರು. ಇದರ ಪರಿಣಾಮ ಹಲವು ವರ್ಷಗಳಿಂದ ಬದಲಿ ನಿವೇಶನಕ್ಕಾಗಿ ಬಿಡಿಎಗೆ  ಅಲೆಯುತ್ತಿದ್ದರು. ಈಗ ಅಂತಿಮವಾಗಿ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರು, ನಿವೇಶನ ಹಂಚಿಕೆದಾರರ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿ, ಕಳೆದ ವರ್ಷ ಸುಮಾರು 300 ನಿವೇಶನದಾರರಿಗೆ ಅರ್ಕಾವತಿಯಲ್ಲಿಯೇ ರಾಂಡಮೈಸ್ ಮೂಲಕ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದರೆ, ಉಳಿದ ನಿವೇಶನ ಹಂಚಿಕೆದಾರರಿಗೆ ಅರ್ಕಾವತಿಯಲ್ಲಿ ಬದಲಿ ನಿವೇಶನ ಗುರುತಿಸಿ ಹಂಚಿಕೆ ಮಾಡುವುದು ತಡವಾಗಿತ್ತು ಎಂದರು.

ಈ ಹಿನ್ನೆಲೆಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಪಡೆಯಲು ಆಸಕ್ತಿ ಇರುವ ಹಂಚಿಕೆದಾರರಿಗೆ ಒಂದು ಅವಕಾಶವನ್ನು ನೀಡಲಾಗಿತ್ತು. ಅದರಂತೆ ಅರ್ಜಿ ಸಲ್ಲಿಸಿದ ಬಹುತೇಕ ಹಂಚಿಕೆದಾರರಿಗೆ ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ರಾಂಡಮೈಸೇಶನ್ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆದಿದ್ದು, ಸಾರ್ವಜನಿಕರೇ ಕಂಪ್ಯೂಟರ್ ನಲ್ಲಿ ಕ್ಲಿಕ್ ಮಾಡುವ ಮೂಲಕ ನಿವೇಶನವನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಅರ್ಕಾವತಿ ಬಡಾವಣೆಯಲ್ಲಿ ಬದಲಿ ನಿವೇಶನಗಳು ಲಭ್ಯವಾಗುವುದು ತಡವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಸಕ್ತಿ ಇರುವ ನಿವೇಶನ ಹಂಚಿಕೆದಾರರು ಕೆಂಪೇಗೌಡ ಬಡಾವಣೆಯಲ್ಲಿ ಬದಲಿ ನಿವೇಶನ ಬಯಸಿ ಅರ್ಜಿ ಸಲ್ಲಿಸಿದರೆ ಅವರಿಗೆ ನಿವೇಶನವನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ತಕ್ಷಣದಿಂದಲೇ ಹಂಚಿಕೆ ಪತ್ರ ವಿತರಣೆ ಮತ್ತು ನೋಂದಣಿ ಪ್ರಕ್ರಿಯೆ
ಈಗಾಗಲೇ ಹತ್ತಾರು ವರ್ಷಗಳಿಂದ ನಿವೇಶನದಾರರು ಬಿಡಿಎಗೆ ಅಲೆದಾಡಿದ್ದಾರೆ. ಅವರನ್ನು ಮತ್ತಷ್ಟು ಕಾಯಿಸದೇ ಈಗ ಹಂಚಿಕೆಯಾಗಿರುವ ಬದಲಿ ನಿವೇಶನಗಳಿಗೆ ಹಂಚಿಕೆ ಪತ್ರ ವಿತರಣೆ ಮತ್ತು ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com