ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಇ-ವೇ ಟೋಲ್: ಎನ್ ಹೆಚ್ಎಐ ಪ್ರತಿಕ್ರಿಯೆ ಕೇಳಿದ ಕರ್ನಾಟಕ ಹೈಕೋರ್ಟ್
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಟೋಲ್ ಸಂಗ್ರಹದ ವಿಚಾರವಾಗಿ 3 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಹೆಚ್ಎಐ) ಗೆ ಸೂಚನೆ ನೀಡಿದೆ.
Published: 16th March 2023 10:46 AM | Last Updated: 16th March 2023 02:34 PM | A+A A-

ಕರ್ನಾಟಕ ಹೈಕೋರ್ಟ್
ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಸಂಚರಿಸುವ ಪ್ರಯಾಣಿಕರು ಪ್ರಸ್ತಾಪಿಸಿರುವ ವಿಷಯದ ಬಗ್ಗೆ ಸ್ವಯಂ ಪ್ರೇರಿತ ದೃಷ್ಟಿ ಹರಿಸಿರುವ ಹೈಕೋರ್ಟ್ ಟೋಲ್ ಸಂಗ್ರಹದ ವಿಚಾರವಾಗಿ 3 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಹೆಚ್ಎಐ) ಗೆ ಸೂಚನೆ ನೀಡಿದೆ.
ಮುಖ್ಯ ನ್ಯಾ. ಪ್ರಸನ್ನ ವರಾಳೆ ಹಾಗೂ ನ್ಯಾ. ಅಶೋಕ್ ಎಸ್ ಕಿಣಗಿ ಅವರಿದ್ದ ಪೀಠ, ಬೆಂಗಳೂರು-ಕನಕಪುರ ನಡುವಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಲ್ಲಿ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ 2022 ರಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುವಾಗ ಈ ಆದೇಶ ನೀಡಿದೆ.
ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿರುವ ಕೋರ್ಟ್, ಎಕ್ಸ್ ಪ್ರೆಸ್ ವೇ ನಲ್ಲಿ ಕಾಮಗಾರಿ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಟೋಲ್ ಸಂಗ್ರಹ ಪ್ರಾರಂಭವಾಗಿರುವುದು ಹಾಗೂ ಬೂಮ್ ತಡೆಗೋಡೆಗಳ ಅಸಮರ್ಪಕ ಕಾರ್ಯನಿರ್ವಹಣೆ ಟೋಲ್ ಬೂತ್‌ಗಳಲ್ಲಿ ವಾಹನಗಳಿಗೆ ಸಣ್ಣ ಹಾನಿಯನ್ನುಂಟುಮಾಡುತ್ತದೆ ಮತ್ತು ಸ್ವಯಂಚಾಲಿತ ಫಾಸ್ಟ್‌ಟ್ಯಾಗ್ ಸ್ಕ್ಯಾನರ್‌ಗಳಲ್ಲಿನ ತಾಂತ್ರಿಕ ದೋಷಗಳು ಕಳವಳಕ್ಕೆ ಕಾರಣವಾಗಿವೆ ಎಂಬ ಅಂಶಗಳನ್ನು ಗಮನಿಸಿದೆ. ಫಾಸ್ಟ್ ಟ್ಯಾಗ್ ಸ್ಕ್ಯಾನರ್ ಗಳಲ್ಲಿನ ತಾಂತ್ರಿಕ ದೋಷದಿಂದಾಗಿ ವಾಹನಗಳು ಸರ್ವೀಸ್ ರಸ್ತೆಯನ್ನು ಬಳಕೆ ಮಾಡುವ ಅನಿವಾರ್ಯತೆ ಸೃಷ್ಟಿಸಿದ್ದು ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಇ-ವೇ ಟೋಲ್ ಸಂಗ್ರಹಕ್ಕೆ ವಿರೋಧ: ಕಾಂಗ್ರೆಸ್ ನಿಂದ ಪ್ರತಿಭಟನೆ
ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹಣೆಯ ನಿರ್ಣಯ) ನಿಯಮಗಳನ್ನು ಉಲ್ಲೇಖಿಸಿರುವ ಕೋರ್ಟ್, ಟೋಲ್ ಸಂಗ್ರಹವನ್ನು ಪ್ರಾರಂಭಿಸುವ ಮೊದಲು ಸಾರ್ವಜನಿಕ ಸೂಚನೆಯನ್ನು ನೀಡುವುದು ಸೇರಿದಂತೆ ವಿವಿಧ ಪೂರ್ವಾಪೇಕ್ಷಿತಗಳನ್ನು ನಿಯಮಗಳು ಕಡ್ಡಾಯಗೊಳಿಸುತ್ತವೆ. ಆದರೆ ಟೋಲ್ ಸಂಗ್ರಹ ಪ್ರಾರಂಭವಾಗುವ ಮೊದಲು ಇದನ್ನು ಮಾಡಲಾಗಿಲ್ಲ. ಆದ್ದರಿಂದ, ಟೋಲ್ ಸಂಗ್ರಹಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಪರಿಗಣಿಸಬೇಕು ಎಂದು ಹೇಳಿದೆ.
ಇನ್ನು ರಸ್ತೆ ವಿಸ್ತರಣೆಯ ಪಿಐಎಲ್ ಗೆ ಸಂಬಂಧಿಸಿದಂತೆ, ಅರ್ಜಿದಾರರು ಹೇಳಿರುವ ಅಂಶಗಳನ್ನು ಪರಿಶೀಲಿಸಲು ನ್ಯಾಯಾಲಯವು ವಕೀಲ ಶಿವಪ್ರಸಾದ್ ಶಾಂತನಗೌಡರನ್ನು ತನ್ನ ಆಯುಕ್ತರನ್ನಾಗಿ ನೇಮಿಸಿದೆ.