
ಕಂದಾಯ ಸಚಿವ ಆರ್.ಅಶೋಕ್
ಚಿತ್ರದುರ್ಗ: ಇತ್ತೀಚಿಗೆ ಸಾರ್ವಜನಿಕ ಹಾಗೂ ರಾಜಕೀಯವಾಗಿ ಉರಿಗೌಡ- ನಂಜೇಗೌಡ ಕುರಿತು ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಇಬ್ಬರು ನಾಯಕರು ಟಿಪ್ಪು ಸುಲ್ತಾನ್ ಹತ್ಯೆ ಮಾಡಿದ ಒಕ್ಕಲಿಗ ನಾಯಕರೆಂದು ಆಡಳಿತಾರೂಢ ಬಿಜೆಪಿ ನಾಯಕರು ಬಿಂಬಿಸುತ್ತಿದ್ದರೆ, ಇವರು ಕಾಲ್ಪನಿಕ ವ್ಯಕ್ತಿಗಳು ಎಂಬುದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ವಾದವಾಗಿದೆ. ಈ ವಿಚಾರದಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳ ನಡುವೆ ವಾಕ್ ಸಮರ ಮುಂದುವರೆದಿದೆ.
ಈ ಮಧ್ಯೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿಂದು ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಉರಿಗೌಡ ಹಾಗೂ ನಂಜೇಗೌಡ ಅವರದು ನೈಜ ಇತಿಹಾಸವೇ ಅಥವಾ ಕಾಲ್ಪನಿಕವೇ ಎಂಬುದನ್ನು ಮರು ಪರಿಶೀಲಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಉರಿಗೌಡ-ನಂಜೇಗೌಡ ಸಿನಿಮಾಗೆ ಸಚಿವ ಮುನಿರತ್ನ ನಿರ್ಮಾಣ!
ಇತಿಹಾಸವನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ, ಇತಿಹಾಸ ಮತ್ತು ಸತ್ಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಯಾವುದೇ ಸಮುದಾಯವನ್ನು ಅವಹೇಳನ ಮಾಡುವ ಉದ್ದೇಶ ಬಿಜೆಪಿಗೆ ಇಲ್ಲ. ಚುನಾವಣಾ ಸಂದರ್ಭದಲ್ಲಿ ಜಾತಿ ರಾಜಕೀಯ ಮಾಡುವುದನ್ನು ಜೆಡಿಎಸ್ ಬಿಡಬೇಕು. ಉರಿಗೌಡ ಮತ್ತು ನಂಜೇಗೌಡ ವಿಚಾರ ಬಿಟ್ಟು ಅಭಿವೃದ್ಧಿ ಹೆಸರಿನಲ್ಲಿ ಚುನಾವಣೆ ನಡೆಯಲಿ ಎಂದು ಸಲಹೆ ನೀಡಿದರು.