ಗ್ರಾಮೀಣ ಭಾಗದ ಹಿನ್ನೆಲೆಯುಳ್ಳವರು ನಗರ ಪ್ರದೇಶಗಳಲ್ಲಿ ತಮ್ಮ ಸಹೋದ್ಯೋಗಿಗಳಿಗೆ ಪೈಪೋಟಿ ನೀಡುವುದು ಕಷ್ಟ ಸಾಧ್ಯವಾಗುವುದರ ಹಿಂದೆ ಪುಸ್ತಕಗಳೆಡೆಗೆ ಹೆಚ್ಚು ಗಮನ ನೀಡುವ ಹಾಗೂ ಅಧ್ಯಯನಕ್ಕೆ ಅಗತ್ಯವಿದ್ದ ವಾತಾವರಣ ಇರದೇ ಇರುವುದು ಪ್ರಮುಖ ಕಾರಣವಾಗಿದೆ.
ಹಿರಿಯ ಐಎಎಸ್ ಅಧಿಕಾರಿ ಹಾಗೂ ಪಂಚಾಯತ್ ರಾಜ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ದಾಸ್ ಗುಪ್ತ, ತಮ್ಮ ತಂಡದ ಅಧಿಕಾರಿಗಳೊಂದಿಗೆ ಹಾಗೂ ಪಂಚಾಯತ್ ನ ಸಹಕಾರದೊಂದಿಗೆ ಗ್ರಾಮೀಣ ಗ್ರಂಥಾಲಯಗಳನ್ನು ಮಕ್ಕಳಿಗಾಗಿ ತೆರೆದು, ಪುಸ್ತಕ, ಕಂಪ್ಯೂಟರ್, ಸ್ಮಾರ್ಟ್ ಸ್ಪೀಕರ್ ಅಲೆಕ್ಸಾಗಳನ್ನು ಪರಿಚಯಿಸುವ ಮೂಲಕ ಗ್ರಾಮೀಣ ಭಾಗದಲ್ಲಿನ ಸಾಕ್ಷರತೆಯಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿದ್ದಾರೆ.
ಕರ್ನಾಟಕದಲ್ಲಿ 2020 ರಲ್ಲಿ ಪ್ರಾರಂಭವಾದ ಓದುವ ಬೆಳಕು ಕಾರ್ಯಕ್ರಮದ ಬಗ್ಗೆ ಹಾಗೂ ಪಂಚಾಯತ್ ರಾಜ್ ನ ಇನ್ನೂ ಕೆಲವು ಪ್ರಮುಖ ವಿಷಯಗಳ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದಾರೆ.
ಓದುವ ಬೆಳಕು ಕಾರ್ಯಕ್ರಮವನ್ನು ಪ್ರಾರಂಭವಾದಾಗಿನಿಂದ ಈ ವರೆಗೂ ಹೇಗೆ ರೂಪಿಸಲಾಗಿದೆ?
ಒಂದು ಮಗುವಿನ ಜೀವನದಲ್ಲಿ ಹಾಗೂ ಗ್ರಹಿಕೆಯ ವಿಷಯದಲ್ಲಿ ಸಾಕ್ಷರತೆ ಎಂಬುದು ಆರಂಭದ ದಿನಗಳಲ್ಲೇ ಎಷ್ಟು ಮಹತ್ವದ್ದು ಹಾಗೂ ಸಹಕಾರಿಯಾಗಿರುವ ಅಂಶ ಎಂಬುದು ನಮಗೆ ತಿಳಿದಿದೆ. ಓದುವ ಬೆಳಕು ಕಾರ್ಯಕ್ರಮವನ್ನು ಕೋವಿಡ್-19 ಸಂದರ್ಭದಲ್ಲಿ ಶಾಲೆಗಳು ಮುಚ್ಚಲ್ಪಟ್ಟಾಗ ರಾಜ್ಯಾದ್ಯಂತ 2020 ರ ನವೆಂಬರ್ ತಿಂಗಳಲ್ಲಿ ಆರಂಭಿಸಲಾಯಿತು. ಎಲ್ಲಾ 5,600 ಗ್ರಾಮೀಣ ಗ್ರಂಥಾಲಯಗಳಲ್ಲೂ ಮಕ್ಕಳ ವಿಭಾಗ ಇರಬೇಕು ಹಾಗೂ ಆ ಮೂಲಕ ಮಕ್ಕಳು ಅಧ್ಯಯನ ನಡೆಸುವತ್ತ ಗಮನ ಹರಿಸುವಂತಾಗಬೇಕು, ಸಮುದಾಯಗಳಲ್ಲಿ ಗ್ರಂಥಾಲಯ ಸಂಸ್ಕೃತಿ ಹೆಚ್ಚಬೇಕು ಎಂದು ನಿರ್ಧರಿಸಿದೆವು.
ಇದನ್ನು ಮುಂದುವರೆಸುವ ನಿಟ್ಟಿನಲ್ಲಿ ನಾವು ಪುಸ್ತಕ ಜೋಳಿಗೆ ಕಾರ್ಯಕ್ರಮ ರೂಪಿಸಿ ಆ ಮೂಲಕ ಬೆಂಗಳೂರು ಸೇರಿದಂತೆ ಇತರ ಜಿಲ್ಲೆ ಹಾಗೂ ಗ್ರಾಮಗಳಿಂದ ಪುಸ್ತಕ ದೇಣಿಗೆ ನೀಡುವ ವ್ಯವಸ್ಥೆ ಮಾಡಿದೆವು. ಇದು ರಾಜ್ಯಾದ್ಯಂತ ಚಳುವಳಿಯ ರೂಪ ಪಡೆದುಕೊಂಡು ಅಜಿಂ ಪ್ರೇಮ್ ಜೊ ಫೌಂಡೇಷನ್, ಶಿಕ್ಷಣ ಫೌಂಡೇಷನ್, ಪ್ರಥಮ್ ಬುಕ್ಸ್, ಅಧ್ಯಯನ, ಸೇರಿದಂತೆ ಅನೇಕ ಎನ್ ಜಿಒ ಗಳು, ಡೆಲ್ ಟೆಕ್ನಾಲಜೀಸ್ ನಂತಹ ಕಾರ್ಪೊರೇಟ್ ಗಳು ಕೈ ಜೋಡಿಸಿದವು ಹಾಗೂ ಇನ್ನೂ ಇತರರು ಸಹಕರಿಸಿದರು.
ಪುಸ್ತಕ ಜೋಳಿಗೆ ಕಾರ್ಯಕ್ರಮದ ಅಡಿಯಲ್ಲಿ ನಾವು 1 ಮಿಲಿಯನ್ ಪುಸ್ತಕಗಳನ್ನು ಸಂಗ್ರಹಿಸಿದೆವು. ಇತ್ತೀಚೆಗೆ ಬೆಳಗಾವಿಯಿಂದ ಇಬ್ಬರು ನಿವೃತ್ತ ಯೋಧರು ಹಾಗೂ ದಕ್ಷಿಣ ಕನ್ನಡದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ದಿವಂಗತ ಹೋರಾಟಗಾರರ ಕುಟುಂಬದವರು ಗ್ರಂಥಾಲಯಕ್ಕೆ ಪುಸ್ತಕಗಳನ್ನು ದೇಣಿಗೆ ನೀಡಿದರು.
‘ಒದುವ ಬೆಳಕು’ ಗ್ರಾಮೀಣ ಗ್ರಂಥಾಲಯಗಳನ್ನು ಕಲಿಕೆ ಮತ್ತು ಸಕಾರಾತ್ಮಕ ಸಂವಹನಕ್ಕಾಗಿ ಸಮುದಾಯ ಸ್ಥಳಗಳಾಗಿ ಪರಿವರ್ತಿಸಲು ಹೇಗೆ ಸಹಾಯ ಮಾಡಿದೆ?
ಕರ್ನಾಟಕದಲ್ಲಿ 6-18 ವಯಸ್ಸಿನ 3.3 ಮಿಲಿಯನ್ ಮಕ್ಕಳು ಗ್ರಾಮೀಣ ಭಾಗದಿಂದ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. 5,600 ಗ್ರಾಮೀಣ ಸಾರ್ವಜನಿಕ ಗ್ರಂಥಾಲಯಗಳು ಜ್ಞಾನ ಕೇಂದ್ರಗಳಾಗುವತ್ತ ಸಾಗಿವೆ. ಮಕ್ಕಳಲ್ಲಿ ಕಲಿಯುವ ಆಸಕ್ತಿ ಇದೆ. ಅವಕಾಶ ಹಾಗೂ ಬೆಂಬಲದ ಅಗತ್ಯವಿದೆ.
ನಮ್ಮ ಗ್ರಂಥಾಲಯದಲ್ಲಿ ಮಕ್ಕಳಿಗೆ ಗ್ರಂಥಾಲಯದ ಕಾರ್ಡ್ ನ್ನು ನೀಡಲಾಗುತ್ತದೆ ಹಾಗೂ ವಾರಾಂತ್ಯವೂ ಸೇರಿದಂತೆ 6 ಗಂಟೆಗಳು ಕಾರ್ಯನಿರ್ವಹಿಸುತ್ತವೆ. ಮಕ್ಕಳು ತಮಗೆ ಬೇಕಾದ ಪುಸ್ತಕವನ್ನು ಆಯ್ಕೆ ಮಾಡಿಕೊಂಡು ಮನೆಗೆ ಕೊಂಡೊಯ್ಯಬಹುದಾಗಿದೆ.
ಘನತ್ಯಾಜ್ಯ ನಿರ್ವಹಣೆ (SWM) ಉಪಕ್ರಮವು ಪಂಚಾಯತ್‌ಗಳಲ್ಲಿ ಹೇಗೆ ರೂಪುಗೊಳ್ಳುತ್ತಿದೆ?
SWM ಪಂಚಾಯತ್‌ಗಳಲ್ಲಿ ವೇಗವನ್ನು ಪಡೆದುಕೊಂಡಿದೆ ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳು (SHGs) ಮುನ್ನಡೆಸುತ್ತಿರುವುದನ್ನು ನೋಡುವುದು ತುಂಬಾ ಸಂತೋಷಕರವಾಗಿದೆ. ದೈನಂದಿನ ತ್ಯಾಜ್ಯ ಸಂಗ್ರಹಣೆ, ತ್ಯಾಜ್ಯ ವಿಂಗಡಣೆ, ಸ್ವಚ್ಛ ವಾಹಿನಿ ಚಾಲನೆ ಮತ್ತು ಮುಂತಾದ SWM ಕರ್ತವ್ಯಗಳನ್ನು ನಿರ್ವಹಿಸಲು ತಮ್ಮನ್ನು ತಾವು ಸ್ಥಳೀಯ ಗ್ರಾಮ ಪಂಚಾಯತ್‌ಗಳ ಮೂಲಕ ಪಾಲುದಾರರಾಗಿ ತೊಡಗಿಸಿಕೊಂಡಿದ್ದಾರೆ. ಸುಮಾರು 12,000 ಮಹಿಳೆಯರು SWM ನಲ್ಲಿ ತರಬೇತಿ ಪಡೆದಿದ್ದಾರೆ ಮತ್ತು 1,200 ಮಹಿಳೆಯರು ಸ್ವಚ್ಛ ವಾಹಿನಿಗಳನ್ನು ನಿರ್ವಹಿಸುತ್ತಿದ್ದಾರೆ. ಸ್ವಯಂ ಆಸಕ್ತಿಯಿಂದ ಈ ಕೆಲಸಗಳನ್ನು ಮಾಡುತ್ತಿದ್ದಾರೆ ಮತ್ತು ಇದರಲ್ಲಿ ತೊಡಗಿಸಿಕೊಂಡವರಿಗೆ ಕುಟುಂಬದವರು ಬೆಂಬಲ ನೀಡುತ್ತಿದ್ದಾರೆ. ಮಹಿಳೆಯರು ಸಾರ್ವಜನಿಕ ಸ್ಥಳಗಳಿಗೆ ಹೋಗುವುದನ್ನು ನೋಡುವುದು ಅವರ ಸಬಲೀಕರಣದ ಸಂಕೇತವಾಗಿದೆ.
ತಳಮಟ್ಟದಲ್ಲಿ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಸರ್ಕಾರ ಎದುರಿಸುತ್ತಿರುವ ಸವಾಲುಗಳೇನು?
ಸರ್ಕಾರದ ಕಡೆಯಿಂದ ಸಂವಹನವನ್ನು ಬಲಪಡಿಸುವ ಅಗತ್ಯವಿದೆ; ವಿವಿಧ ತಾಲೂಕುಗಳು ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಕಳುಹಿಸಲಾದ ಸರ್ಕಾರಿ ಆದೇಶವನ್ನು ಜನರಿಗೆ ಅರ್ಥವಾಗುವಂತೆ ವಿವರಿಸಬೇಕು ಆದೇಶದ ಆಡಳಿತ ಭಾಷೆ ಹಾಗೂ ಯೋಜನೆಯ ಸಮರ್ಪಕ ಅನುಷ್ಠಾನವಾಗಬೇಕಾದರೆ, ಒಬ್ಬ ಸಾಮಾನ್ಯ ವ್ಯಕ್ತಿಯಿಂದ ಅನುವಾದಿಸಬೇಕು. ನಿಯಮಗಳು ಮತ್ತು ನಿಬಂಧನೆಗಳು ಅಥವಾ ಸರ್ಕಾರಿ ಆದೇಶಗಳು ಆನ್‌ಲೈನ್‌ನಲ್ಲಿ ಮತ್ತು ಬೇರೆಡೆ ಲಭ್ಯವಾಗುವಂತೆ ಮಾಡಬೇಕಿದೆ.
ಹೆಚ್ಚಿದ ಗ್ರಾಮೀಣ ಸಾಕ್ಷರತೆಯ ಪ್ರಮಾಣ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಸುಧಾರಿಸಿದೆಯೇ?
ಕರ್ನಾಟಕದಲ್ಲಿ ಪಂಚಾಯತ್ ಸದಸ್ಯರ ಪ್ರೊಫೈಲ್ ಗಣನೀಯವಾಗಿ ಬದಲಾಗಿದೆ. ಈ ಹಿಂದೆ ಮಹಿಳೆಯರಿಗೆ ಶೇ.33ರಷ್ಟಿದ್ದ ಮೀಸಲಾತಿಯನ್ನು ಕೆಲವು ವರ್ಷಗಳ ಹಿಂದೆ ಶೇ.50ಕ್ಕೆ ಹೆಚ್ಚಿಸಲಾಗಿತ್ತು. ಅನಕ್ಷರತೆಯ ಕಾರಣದಿಂದ ಮಾತ್ರವಲ್ಲದೆ ಹೆಚ್ಚಾಗಿ ಪುರುಷ ಪ್ರಧಾನದ ವ್ಯವಸ್ಥೆಯ ಕಾರಣದಿಂದಾಗಿ ಮಹಿಳೆಯರ ಬದಲಾಗಿ ಪುರುಷರೇ ಅಧಿಕಾರ ನಡೆಸುತ್ತಿರುತ್ತಾರೆ. ವರ್ಷಗಳಲ್ಲಿ, ಉತ್ತಮ ನಾಯಕತ್ವ ಕೌಶಲ್ಯಗಳನ್ನು ಪ್ರದರ್ಶಿಸುವ ಅರೆ-ಸಾಕ್ಷರ ಮಹಿಳೆಯರೂ ಸಹ ಚುನಾಯಿತರಾಗುವ ಬದಲಾವಣೆ ಕಂಡುಬರುತ್ತದೆ.
ತರಬೇತಿ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತಿದೆ ಮತ್ತು ಮಹಿಳೆಯರನ್ನು ಮುಂಚೂಣಿಗೆ ಕರೆತರಲಾಗುತ್ತಿದೆ. ವಿಶೇಷವಾಗಿ ಹಳ್ಳಿಗಳಾದ್ಯಂತ ಸಾಮಾಜಿಕ ಮೂಲಸೌಕರ್ಯವನ್ನು ಸುಧಾರಿಸುವತ್ತ ಗಮನಹರಿಸುತ್ತದೆ.
ಸರ್ಕಾರದಿಂದ ಹಲವಾರು ಪ್ರಯತ್ನಗಳ ಹೊರತಾಗಿಯೂ, ಕರ್ನಾಟಕದಲ್ಲಿ ಬಾಲ್ಯ ವಿವಾಹಗಳು ಏಕೆ ಇನ್ನೂ ಹೆಚ್ಚಾಗಿವೆ?
ಬಾಲ್ಯವಿವಾಹ ಪ್ರಕರಣಗಳು ಈಗ ತುಲನಾತ್ಮಕವಾಗಿ ಕಡಿಮೆಯಾಗಿದ್ದರೂ ಹೆಚ್ಚಿನ ಶೇಕಡಾವಾರು ಪ್ರಕರಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. NFHS-3 ಪ್ರಕಾರ, ಸುಮಾರು ಶೇ.40 ರಷ್ಟು ಪ್ರಕರಣಗಳಿವೆ. ಇದು NFHS-4 ನಲ್ಲಿ ಸುಮಾರು 20 ಪ್ರತಿಶತಕ್ಕೆ ಇಳಿದಿದೆ. ದೇವದಾಸಿ ಪದ್ಧತಿಯನ್ನು ಸಾಂಪ್ರದಾಯಿಕವಾಗಿ ಪಾಲಿಸಿಕೊಂಡು ಬಂದಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು.
ಎರಡಕ್ಕೂ ಮುಖ್ಯ ಕಾರಣ ಲಿಂಗ ತಾರತಮ್ಯ. ಬಾಲ್ಯವಿವಾಹ ತಡೆ ಕಾಯ್ದೆಗೆ (ಪಿಸಿಎಂಎ) ತಿದ್ದುಪಡಿ ತರಲಾಗಿದ್ದು, ಬಾಲ್ಯವಿವಾಹಕ್ಕೆ ಅವಕಾಶ ಕಲ್ಪಿಸುವ ಲೋಪದೋಷಗಳನ್ನು ತೆಗೆದುಹಾಕಲಾಗಿದೆ. ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವುದು ಈ ಪದ್ಧತಿಯನ್ನು ನಿಲ್ಲಿಸುವ ಪ್ರಮುಖ ಮಾರ್ಗವಾಗಿದೆ. ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ಉನ್ನತೀಕರಿಸಲು ಹಲವಾರು ಮಹಿಳಾ-ಆಧಾರಿತ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಬಾಲ್ಯವಿವಾಹ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡುವುದಕ್ಕಾಗಿ ಕರ್ನಾಟಕದಲ್ಲಿ ಸುಮಾರು 58,000 ಅಧಿಕಾರಿಗಳು ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು (CMPO) ಕಾರ್ಯನಿರ್ವಹಿಸುತ್ತಿದ್ದಾರೆ.
Advertisement